ಜಮ್ಮು : ಜನರ ಅಗತ್ಯ ಗಮನಿಸಿ ನೆರವಾಗಲು ರಾಜ್ಯಪಾಲರ ಸೂಚನೆ

Update: 2019-08-07 16:30 GMT

ಶ್ರೀನಗರ, ಆ.7: ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಣಯ ಅಂಗೀಕರಿಸಿದ ಮರುದಿನ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ರಾಜಭವನದಲ್ಲಿ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.

ರಾಜ್ಯದ ಜನರ ಅಗತ್ಯವನ್ನು ಗಮನಿಸಿ ಸೂಕ್ತ ನೆರವು ನೀಡುವಂತೆ ರಾಜ್ಯಪಾಲರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಸಹಜತೆಗೆ ಮರಳಿದ್ದು ಜನರು ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ವಿದ್ಯುತ್ ಮತ್ತು ನೀರು ಪೂರೈಕೆ ವ್ಯವಸ್ಥೆ ಕೂಡಾ ಸಹಜ ಸ್ಥಿತಿಗೆ ಮರಳಿದೆ ರಸ್ತೆಯಲ್ಲಿ ಜನರ ಸಂಚಾರ ವಿರಳವಾಗಿದ್ದರೂ ಖಾಸಗಿ ಟ್ಯಾಕ್ಸಿಗಳು ಓಡಾಟ ನಡೆಸಿವೆ. ಶುಭ ಕಾರ್ಯಕ್ರಮ ಇರುವ ಮನೆಯವರಿಗೆ ಭದ್ರತಾ ಪಡೆಗಳು ನೆರವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಾಶ್ಮೀರದಲ್ಲಿರುವ ಪ್ರವಾಸಿಗರು ಅಥವಾ ಇತರ ಜನರು ಯಾವುದೇ ತೊಂದರೆ ಎದುರಾದರೂ ತಕ್ಷಣ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ರಾಜಭವನದ ಅಧಿಕಾರಿಗಳು ಸೂಚಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಂಗಳವಾರ ರಾತ್ರಿ ಜಮ್ಮು ಕಾಶ್ಮೀರಕ್ಕೆ ಆಗಮಿಸಿ ರಾಜ್ಯಪಾಲರನ್ನು ಭೇಟಿಮಾಡಿ ರಾಜ್ಯದ ಭದ್ರತಾ ಸ್ಥಿತಿಯ ಪರಾಮರ್ಶೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News