370ನೇ ವಿಧಿ : ಆಪ್ ನಿಲುವಿಗೆ ಪಕ್ಷದ ಯುವ ನಾಯಕಿಯ ವಿರೋಧ

Update: 2019-08-07 16:36 GMT

ಹೊಸದಿಲ್ಲಿ, ಆ.7: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ನಿಲುವಿಗೆ ಅರವಿಂದ್ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಆಪ್) ಬೆಂಬಲ ಸೂಚಿಸಿರುವುದಕ್ಕೆ ಪಕ್ಷದ ಯುವ ನಾಯಕಿ ತೀವ್ರ ಅಸಮಾಧಾನ ಸೂಚಿಸಿದ್ದಾರೆ. ಓರ್ವ ಆಪ್ ಸದಸ್ಯೆಯಾಗಿ, 370ನೇ ವಿಧಿಯ ಬಗ್ಗೆ ಆಪ್ ಮತ್ತು ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರೀವಾಲ್ ಅವರ ನಿಲುವನ್ನು ಗಮನಿಸಿ ಆಘಾತವಾಗಿದೆ. ಬಿಜೆಪಿ ಮತ್ತು ಕೇಂದ್ರ ಸರಕಾರದ ಪ್ರಜಾಪ್ರಭುತ್ವ ವಿರೋಧಿ, ಹಿಂಸಾತ್ಮಕ ಮತ್ತು ಬಲಪಂಥೀಯ ಕ್ರಮವನ್ನು ಬೆಂಬಲಿಸುವುದನ್ನು ಕಂಡು ಗಾಭರಿಯಾಗಿದೆ ಎಂದು ಆಪ್ ಸದಸ್ಯೆ, ನರ್ಮದಾ ಬಚಾವೊ ಆಂದೋಲನದ ಹಿರಿಯ ಮುಖಂಡೆ ಚಿತಾರೂಪ ಪಾಲಿತ್ ಫೇಸ್‌ಬುಕ್ ಪೇಜ್‌ನಲ್ಲಿ ಬರೆದಿದ್ದಾರೆ.

ಕಾಶ್ಮೀರದಲ್ಲಿ ನ್ಯಾಯಬದ್ಧವಾಗಿ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳನ್ನು ವಿವೇಚನೆಯಿಲ್ಲದೆ ಏಕಪಕ್ಷೀಯವಾಗಿ ಬಂಧಿಸಿರುವುದನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 144 ಜಾರಿಗೊಳಿಸಿರುವುದು, ಸಂವಹನ ವ್ಯವಸ್ಥೆಯನ್ನು ಕಡಿತಗೊಳಿಸಿರುವ ಕ್ರಮವನ್ನು ಕೇಜ್ರೀವಾಲ್ ಹೇಗೆ ಬೆಂಬಲಿಸಲು ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ. ಸರಕಾರದ ಏಕಪಕ್ಷೀಯ ನಿರ್ಧಾರವನ್ನು ಬೆಂಬಲಿಸುವ ಮೂಲಕ ಆಪ್, ಪ್ರಜಾಪ್ರಭುತ್ವ, ಸ್ವರಾಜ್ಯ ಮತ್ತು ಮನವ ಹಕ್ಕುಗಳ ಸಿದ್ಧಾಂತಕ್ಕೆ ವಿರುದ್ಧ ನಿಲುವು ತಳೆದಂತಾಗಿದೆ. ಸರಕಾರದ ಕ್ರಮಕ್ಕೆ ಆಪ್ ನೀಡಿರುವ ವ್ಯೆಹಾತ್ಮಕ ಬೆಂಬಲ ಸಹಕಾರಿ ಒಕ್ಕೂಟಕ್ಕೆ ವಿರುದ್ಧವಾಗಿದೆ. ಬಲಪಂಥೀಯರು ಇದೇ ರೀತಿ ದಿಲ್ಲಿಯಲ್ಲೂ ಪ್ರಭುತ್ವ ಸಾಧಿಸಿದರೆ ನಾವು ಅಲ್ಲಿ ಸ್ಥಾಪಿಸಿರುವ ಸರಕಾರಿ ಶಾಲೆಗಳನ್ನು ಅವರು ಖಾಸಗೀಕರಣಗೊಳಿಸುತ್ತಾರೆ. ಪ್ರಜಾಪ್ರಭುತ್ವ ಇಲ್ಲದಿದ್ದರೆ ಎಲ್ಲವೂ ನಾಶವಾಗುತ್ತದೆ. ಆಪ್ ಪಕ್ಷವು ಬಡಜನರ, ಅಶಕ್ತರ, ಜನಸಾಮಾನ್ಯರ ಧ್ವನಿಯಾಗಿ, ಅವರು ಪ್ರತಿರೋಧ ವ್ಯಕ್ತಪಡಿಸಲು ಇರುವ ವೇದಿಕೆಯಾಗಿ ಪರಿಗಣಿಸಲ್ಪಟ್ಟಿದೆ. ಇದಕ್ಕೆ ವಿರುದ್ಧವಾಗಿ ನಡೆದರೆ ಪಕ್ಷವು ಅರ್ಥ ಕಳೆದುಕೊಳ್ಳುತ್ತದೆ ಮತ್ತು ಈ ಪಕ್ಷವೂ ಅನ್ಯಾಯದ ಕಾರ್ಯದ ಸಹಯೋಗಿ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News