ವಿಂಡೀಸ್ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಕೊಹ್ಲಿ ಪಡೆ
► 3ನೇ ಪಂದ್ಯ: ಭಾರತಕ್ಕೆ ಭರ್ಜರಿ ಜಯ
► ಧೋನಿ ದಾಖಲೆ ಮುರಿದ ಪಂತ್
► ಕೊಹ್ಲಿ ಅರ್ಧಶತಕ
ಪ್ರೊವಿಡೆನ್ಸ್, ಆ.7: ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್(ಔಟಾಗದೆ 65, 42 ಎಸೆತ) ಹಾಗೂ ನಾಯಕ ವಿರಾಟ್ ಕೊಹ್ಲಿ(59,45 ಎಸೆತ)ಅವರ ಅರ್ಧಶತಕಗಳ ಕೊಡುಗೆ ನೆರವಿನಿಂದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಕೊಹ್ಲಿ ಪಡೆ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ. ವಿಂಡೀಸ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಸತತ ಆರನೇ ಸೋಲು ಕಂಡಿದೆ.
42 ಎಸೆತಗಳಲ್ಲಿ ಔಟಾಗದೆ 65 ರನ್ ಗಳಿಸಿದ ಪಂತ್ ಟ್ವೆಂಟಿ-20ಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಎಂಬ ಹಿರಿಮೆಗೆ ಪಾತ್ರರಾದರು. ಇದರೊಂದಿಗೆ 2017ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ 56 ರನ್ ಗಳಿಸಿದ್ದ ಮಾಜಿ ನಾಯಕ ಎಂ.ಎಸ್. ಧೋನಿ ದಾಖಲೆಯನ್ನು ಮುರಿದರು.
ಮಂಗಳವಾರ ಇಲ್ಲಿನ ಗಯಾನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಒದ್ದೆ ಮೈದಾನದಿಂದಾಗಿ ಟಾಸ್ ಚಿಮ್ಮುವ ಪ್ರಕ್ರಿಯೆ ವಿಳಂಬವಾಗಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ವೆಸ್ಟ್‌ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿತು.
ಗೆಲ್ಲಲು ಸುಲಭ ಸವಾಲನ್ನೇ ಪಡೆದಿದ್ದ ಭಾರತ 27 ರನ್ ಗಳಿಸುವಷ್ಟರಲ್ಲಿ ಮೊದಲ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ವೇಗದ ಬೌಲರ್ ಒಶಾನೆ ಥಾಮಸ್ ಹಾಗೂ ಸ್ಪಿನ್ನರ್ ಫ್ಯಾಬಿಯೆನ್ ಅಲ್ಲೆನ್ ಭಾರತ ಇನಿಂಗ್ಸ್‌ನ 5ನೇ ಓವರ್‌ನಲ್ಲಿ 27 ರನ್ ಗಳಿಸಿದ್ದಾಗ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು.
ಆಗ ಜೊತೆಯಾದ ನಾಯಕ ಕೊಹ್ಲಿ(59, 45 ಎಸೆತ, 6 ಬೌಂಡರಿ) ಹಾಗೂ ರಿಷಭ್ ಪಂತ್(ಔಟಾಗದೆ 65, 42 ಎಸೆತ, 4 ಬೌಂಡರಿ,4 ಸಿಕ್ಸರ್)3ನೇ ವಿಕೆಟ್‌ಗೆ 106 ರನ್ ಸೇರಿಸಿ ತಂಡವನ್ನು ಆಧರಿಸಿದರು. ಭಾರತಕ್ಕೆ ಗೆಲ್ಲಲು 14 ರನ್ ಅಗತ್ಯವಿದ್ದಾಗ ಕೊಹ್ಲಿ(59) ವೇಗಿ ಥಾಮಸ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಕಾರ್ಲೊಸ್ ಬ್ರಾತ್‌ವೇಟ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದ ಪಂತ್ ಟೀಮ್ ಇಂಡಿಯಾ 19.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 150 ರನ್ ಕಲೆ ಹಾಕಲು ನೆರವಾದರು.
ಮನೀಶ್ ಪಾಂಡೆ ಔಟಾಗದೆ 2 ರನ್ ಗಳಿಸಿದರು. ವಿಂಡೀಸ್ ಪರ ಥಾಮಸ್(2-29)ಎರಡು ವಿಕೆಟ್ ಪಡೆದರು.
ಚೊಚ್ಚಲ ಪಂದ್ಯದಲ್ಲೇ 3 ಓವರ್‌ಗಳಲ್ಲಿ ಕೇವಲ 4 ರನ್ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿ ಗಮನಾರ್ಹ ಪ್ರದರ್ಶನ ನೀಡಿದ ದೀಪಕ್ ಚಹಾರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
‘‘ನಾವು ರಿಷಭ್ ಪಂತ್‌ರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದ್ದೇವೆ. ಅವರಲ್ಲಿ ಸಾಕಷ್ಟು ಕೌಶಲ್ಯತೆ ಹಾಗೂ ಪ್ರತಿಭೆಯಿದೆ. ಅವರಿಗೆ ಇನ್ನಷ್ಟು ಅವಕಾಶ ನೀಡಬೇಕು. ಒತ್ತಡ ಹೇರಬಾರದು. ತಂಡವಾಗಿ ವೃತ್ತಿಪರತೆ ಪ್ರದರ್ಶಿಸಲು ಬಯಸುತ್ತಿದ್ದೇವೆ. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಮನರಂಜನೆ ನಿರೀಕ್ಷಿಸುತ್ತಿದ್ದೇವೆ’’ ಎಂದು ಪಂದ್ಯ ಬಳಿಕ ಕೊಹ್ಲಿ ಪ್ರತಿಕ್ರಿಯಿಸಿದರು.
ಸಂಕ್ಷಿಪ್ತ ಸ್ಕೋರ್
►ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 146/6
(ಪೊಲಾರ್ಡ್ 58, ಪೊವೆಲ್ ಔಟಾಗದೆ 32, ಪೂರನ್ 17, ದೀಪಕ್ ಚಹಾರ್ 3-4, ಸೈನಿ 2-34, ಚಹಾರ್ 1-27)
►ಭಾರತ: 19.1 ಓವರ್‌ಗಳಲ್ಲಿ 150/3
(ವಿರಾಟ್ ಕೊಹ್ಲಿ 59, ರಿಷಭ್ ಪಂತ್ ಔಟಾಗದೆ 65, ಕೆಎಲ್ ರಾಹುಲ್ 20, ಒ.ಥಾಮಸ್ 2-29,ಅಲ್ಲೆನ್ 1-18)
►ಪಂದ್ಯಶ್ರೇಷ್ಠ: ದೀಪಕ್ ಚಹಾರ್
►ಸರಣಿಶ್ರೇಷ್ಠ: ಕೃನಾಲ್ ಪಾಂಡ್ಯ.