ಇಂದು ಮೊದಲ ಏಕದಿನ: ಭಾರತ-ವಿಂಡೀಸ್ ಮುಖಾಮುಖಿ

Update: 2019-08-07 18:17 GMT

ಪ್ರೊವಿಡೆನ್ಸ್(ಗಯಾನ), ಆ.7: ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಆಘಾತಕಾರಿ ಸೋಲನುಭವಿಸಿದ ಬಳಿಕ ಮೊದಲ ಬಾರಿ ಏಕದಿನ ಮಾದರಿ ಕ್ರಿಕೆಟ್‌ಗೆ ವಾಪಸಾಗಲು ಸಜ್ಜಾಗಿರುವ ಭಾರತ ಗುರುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್‌ನ್ನು ಮುಖಾಮುಖಿಯಾಗಲಿದೆ. ತನ್ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಬಳಿಕ ಭಾರತದ ಮೂರನೇ ಶ್ರೇಷ್ಠ ಆಟಗಾರನಾಗಿರುವ ಶಿಖರ್ ಧವನ್ ಏಕದಿನ ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ. 130 ಏಕದಿನ ಪಂದ್ಯಗಳಲ್ಲಿ 17 ಶತಕಗಳನ್ನು ಸಿಡಿಸಿರುವ ಧವನ್ ಅವರು ರೋಹಿತ್‌ರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ರೋಹಿತ್-ಧವನ್ ಭಾರತ ಇನಿಂಗ್ಸ್ ಆರಂಭಿಸಿದ್ದರು.

ಧವನ್ ಇನಿಂಗ್ಸ್ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಕೆ.ಎಲ್. ರಾಹುಲ್ 4ನೇ ಕ್ರಮಾಂಕದಲ್ಲಿ ವಾಪಸಾಗಬೇಕಾಗಿದೆ. ಕೇದಾರ್ ಜಾಧವ್ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ. ಇನ್ನುಳಿದ ಮಧ್ಯಮ ಕ್ರಮಾಂಕದ ಸ್ಥಾನಗಳಿಗೆ ಮನೀಶ್ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

ಪಾಂಡೆ ಹಾಗೂ ಅಯ್ಯರ್ ಪ್ರತಿಭಾವಂತ ಆಟಗಾರರಾಗಿದ್ದಾರೆ. ಆದರೆ, ಇದೀಗ ಕೊನೆಗೊಂಡ ಟ್ವೆಂಟಿ-20 ಸರಣಿಯಲ್ಲ್ಲಿ ಪಾಂಡೆ ಗಮನಾರ್ಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಟೀಮ್ ಮ್ಯಾನೇಜ್‌ಮೆಂಟ್ ಅಯ್ಯರ್‌ರತ್ತ ಗಮನ ಹರಿಸುವ ಸಾಧ್ಯತೆಯಿದೆ.

ಅಮೆರಿಕ ಹಾಗೂ ಕೆರಿಬಿಯನ್‌ನಾಡಿನಲ್ಲಿ ನಡೆದ ಭಾರತ-ವಿಂಡೀಸ್ ನಡುವಿನ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭುವನೇಶ್ವರ ಕುಮಾರ್ ಆಡಿದ್ದರು. ಕುಮಾರ್ ಏಕದಿನ ಕ್ರಿಕೆಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದು, ಮುಹಮ್ಮದ್ ಶಮಿ ವೇಗದ ಬೌಲಿಂಗ್ ದಾಳಿ ನೇತೃತ್ವವಹಿಸಲಿದ್ದಾರೆ. ಚೊಚ್ಚಲ ಪಂದ್ಯ ಆಡಲು ನವದೀಪ್ ಸೈನಿ ಸಜ್ಜಾಗಿದ್ದಾರೆ.

2019ರ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿಯನ್ನು ಪ್ರವೇಶಿಸಿದ್ದ ಭಾರತ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೋಲುವ ಮೂಲಕ ಎಲ್ಲರನ್ನೂ ನಿರಾಸೆಗೊಳಿಸಿತ್ತು.

ಇದೀಗ ವಿಶ್ವಕಪ್ ಸೋಲನ್ನು ಮರೆತು ಒಂದಾಗಿರುವ ಕೊಹ್ಲಿ ಪಡೆ ಮಂಗಳವಾರ ಕೊನೆಗೊಂಡ ವಿಂಡೀಸ್ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ.

 ವಿಶ್ವಕಪ್‌ನಲ್ಲಿನ ನಿರಾಸೆ ತಂಡವನ್ನು ನಿರಂತರವಾಗಿ ಕಾಡಿದರೂ ವಿಂಡೀಸ್ ವಿರುದ್ಧ ಸರಣಿಯಲ್ಲಿ ಸ್ಪೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತನ್ನ ತಂಡಕ್ಕೆ ವಾಪಸಾದರೂ ಕೊಹ್ಲಿ ಪಡೆ ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕವಿದೆ.

ಬಲಿಷ್ಠ ಬೌಲಿಂಗ್ ದಾಳಿ ಹೊಂದಿರುವ ಭಾರತ, ಕೆಲವು ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ರೋಹಿತ್ ಶರ್ಮಾ 50 ಓವರ್ ಮಾದರಿ ಕ್ರಿಕೆಟ್‌ನಲ್ಲಿ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸುವತ್ತ ಚಿತ್ತವಿರಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ರೋಹಿತ್ ಒಟ್ಟು 5 ಶತಕಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದರು.

 ಬೆರಳು ಮೂಳೆ ಮುರಿತದಿಂದಾಗಿ ವಿಶ್ವಕಪ್‌ನ ಲೀಗ್ ಹಂತದಲ್ಲೇ ಹೊರಗುಳಿದಿದ್ದ ಧವನ್ ಆಸ್ಟ್ರೇಲಿಯ ವಿರುದ್ಧ ಆಕರ್ಷಕ ಶತಕ ಸಿಡಿಸಿದ್ದರು. ವಿಶ್ವಕಪ್‌ನಲ್ಲಿ ಕೊಹ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಯುವ ಆಟಗಾರರಾದ ರಿಷಭ್ ಪಂತ್ ಹಾಗೂ ಕೃನಾಲ್ ಪಾಂಡ್ಯ ಟ್ವೆಂಟಿ-20 ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚುವ ಮೂಲಕ ನಾಯಕ ಕೊಹ್ಲಿ ಮೇಲೆ ಪ್ರಭಾವಬೀರಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನ ಆಲ್‌ರೌಂಡ್ ಪ್ರದರ್ಶನಕ್ಕೆ ಕೃನಾಲ್ ಸರಣಿಶ್ರೇಷ್ಠ ಗೌರವ ಪಡೆದಿದ್ದಾರೆ.

 ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಸಂಪೂರ್ಣ ವಿಫಲವಾಗಿರುವ ವಿಂಡೀಸ್ ತಂಡ ಗೇಲ್ ವಾಪಸಾತಿಯಿಂದಾಗಿ ಒಂದಷ್ಟು ಹೋರಾಟ ನೀಡುವ ವಿಶ್ವಾಸದಲ್ಲಿದೆ. ಭಾರತ ವಿರುದ್ಧ ಸ್ವದೇಶದಲ್ಲಿ ನಡೆಯುವ ಸರಣಿಯು ನನ್ನ ವಿದಾಯದ ಪಂದ್ಯವಾಗಲಿದೆ ಎಂದು ವಿಶ್ವಕಪ್‌ನ ವೇಳೆ ಗೇಲ್ ಘೋಷಿಸಿದ್ದರು.

ವಿಂಡೀಸ್‌ನ 14 ಸದಸ್ಯರ ತಂಡದಲ್ಲಿ ಎಡಗೈ ಆರಂಭಿಕ ಆಟಗಾರ ಜಾನ್ ಕ್ಯಾಂಪ್‌ಬೆಲ್, ರೋಸ್ಟನ್ ಚೇಸ್ ಹಾಗೂ ಆಲ್‌ರೌಂಡರ್ ಕೀಮೊ ಪಾಲ್ ಸ್ಥಾನ ಪಡೆದಿದ್ದಾರೆ.

 ಗುರುವಾರ ಗಯಾನದಲ್ಲಿ ಆರಂಭವಾಗಲಿರುವ ಏಕದಿನ ಸರಣಿಯ ಉಳಿದೆರಡು ಪಂದ್ಯಗಳು ಆ.11 ಹಾಗೂ 14 ರಂದು ಟ್ರಿನಿಡಾಡ್‌ನ ಕ್ವೀನ್ಸ್‌ಪಾರ್ಕ್‌ನಲ್ಲಿ ನಡೆಯಲಿದೆ.

ತಂಡಗಳು

►ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್(ವಿಕೆಟ್‌ಕೀಪರ್), ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಕೇದಾರ್ ಜಾಧವ್, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ.

►ವೆಸ್ಟ್‌ಇಂಡೀಸ್: ಜೇಸನ್ ಹೋಲ್ಡರ್(ನಾಯಕ), ಕ್ರಿಸ್ ಗೇಲ್, ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂಯಿಸ್, ಶೈ ಹೋಪ್, ಶಿಮ್ರಾನ್ ಹೆಟ್ಮೆಯರ್, ನಿಕೊಲಸ್ ಪೂರನ್, ರೋಸ್ಟನ್ ಚೇಸ್, ಫ್ಯಾಬಿಯನ್ ಅಲ್ಲೆನ್, ಚಾರ್ಲೊಸ್ ಬ್ರಾತ್‌ವೇಟ್, ಕೀಮೊ ಪಾಲ್, ಶೆಲ್ಡನ್ ಕೊಟ್ರೆಲ್, ಒಶಾನ್ ಥಾಮಸ್, ಕೇಮರ್ ರೋಚ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News