×
Ad

ಜಮ್ಮು-ಕಾಶ್ಮೀರದ ಕರ್ಫ್ಯೂ, ಮಾಜಿ ಮುಖ್ಯಮಂತ್ರಿಗಳ ಬಂಧನ ಖಂಡಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ

Update: 2019-08-08 11:27 IST

 ಹೊಸದಿಲ್ಲಿ, ಆ.8: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370ರ ರದ್ದು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಕಾಶ್ಮೀರ ಕಣಿವೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೇರಲಾಗಿರುವ ಕರ್ಫ್ಯೂ ಹಾಗೂ ಮಾಜಿ ಮುಖ್ಯಮಂತ್ರಿಗಳ ಬಂಧನವನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ತನ್ನ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ವಿನಂತಿಸಿಕೊಂಡಿರುವ ಪೂನಾವಾಲಾ, ಸೋಮವಾರ ಬಂಧಿಸಲ್ಪಟ್ಟಿರುವ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ್ ಮುಫ್ತಿ ಹಾಗೂ ಉಮರ್ ಅಬ್ದುಲ್ಲಾರನ್ನು ಬಿಡುಗಡೆಗೊಳಿಸಲು ಆದೇಶಿವಂತೆಯೂ ನ್ಯಾಯಾಲಯವನ್ನು ಕೋರಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಹತ್ವದ ನಿರ್ಧಾರವನ್ನು ಪ್ರಕಟಿಸುವ ಕೆಲವೇ ಗಂಟೆಗಳ ಮೊದಲು ಈ ಇಬ್ಬರು ನಾಯಕರುಗಳನ್ನು ಗೃಹಬಂಧನದಲ್ಲಿಡಲಾಗಿತ್ತು. ಇವರನ್ನು ಯಾವಾಗ ಬಿಡುಗಡೆ ಮಾಡುತ್ತಾರೆಂಬ ಕುರಿತು ಮಾಹಿತಿಯಿಲ್ಲ.

ಸಂಪರ್ಕವನ್ನು ಸಂಪೂರ್ಣ ಮುಚ್ಚುವ ಭಾಗವಾಗಿ ದೂರವಾಣಿ ಸೇವೆಗಳು ಹಾಗೂ ಅಂತರ್ಜಾಲ ಸಂಪರ್ಕಗಳನ್ನು ಅಮಾನತಿನಲ್ಲಿಡಲಾಗಿದೆ. ಉನ್ನತಾಧಿಕಾರಿಗಳು ಸಂವಹನಕ್ಕಾಗಿ ಉಪಗ್ರಹ ಫೋನ್‌ಗಳನ್ನು ಬಳಸುತ್ತಿದ್ದಾರೆ.

ಜಮ್ಮು-ಕಾಶ್ಮೀರದೊಳಗಿನ ಪರಿಸ್ಥಿತಿಯನ್ನು ಅವಲೋಕಿಸಲು ನ್ಯಾಯಾಂಗ ಆಯೋಗವನ್ನು ನೇಮಕ ಮಾಡಬೇಕು. ಕೇಂದ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರವು ಸಂವಿಧಾನದ ವಿಧಿ 19 ಹಾಗೂ 21ರಲ್ಲಿ ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪೂನಾವಾಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News