ಮಾವೋವಾದಿ ಸೋದರಿ ವಿರುದ್ಧ ಪೊಲೀಸ್ ಸೋದರನಿಂದ ಕಾರ್ಯಾಚರಣೆ: ಗುಂಡಿನ ಚಕಮಕಿ

Update: 2019-08-08 08:51 GMT

ಸುಕ್ಮಾ, ಆ.8: ಛತ್ತೀಸಗಢದ ಸುಕ್ಮಾ ಜಿಲ್ಲೆಯ ಬಲೆಂಗ್ಟೋಂಗ್  ಪ್ರದೇಶದ ಗುಡ್ಡಗಾಡು ಅರಣ್ಯ ಪ್ರದೇಶದ ಸಮೀಪವಿದ್ದ ಮಾವೋವಾದಿ ಶಿಬಿರವನ್ನು 140 ಮಂದಿಯಿದ್ದ  ಸುಕ್ಮಾ ಪೊಲೀಸರ ತಂಡ ಜುಲೈ 29ರ ಬೆಳಿಗ್ಗೆ 7 ಗಂಟೆಗೆ ಸುತ್ತುವರಿದಿತ್ತು. ಸುಕ್ಮಾ ಪೊಲೀಸರ ಗೋಪ್ನಿಯಾ ಸೈನಿಕ್ (ರಹಸ್ಯ ಸೈನಿಕ) ಹಾಗೂ  ಕಾರ್ಯಾಚರಣೆಯ  ಸೆಕ್ಷನ್ ಕಮಾಂಡರ್ ಆಗಿದ್ದ  ವೆಟ್ಟಿ ರಾಮ ನೀಡಿದ ಸುಳಿವಿನ ಆಧಾರದಲ್ಲಿ ಈ ತಂಡ ರಾತ್ರಿಯಿಡೀ ಸಂಚರಿಸಿ ಈ ಸ್ಥಳ  ತಲುಪಿತ್ತು.

ಇವರ ಟಾರ್ಗೆಟ್  ಮಾವೋವಾದಿ ವೆಟ್ಟಿ ಕನ್ನಿ ಮತ್ತಾಕೆಯ 30 ಮಂದಿ ಸದಸ್ಯರ ತಂಡವಾಗಿತ್ತು. ವೆಟ್ಟಿ ಕನ್ನಿ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಮಾವೋವಾದಿಯಾಗಿದ್ದಾಳಲ್ಲದೆ, ಮಾವೋವಾದಿ ಕೊಂಟ ಏರಿಯಾ ಸಮಿತಿಯ ಸದಸ್ಯೆಯಾಗಿದ್ದಾಳೆ. ಆಕೆಯ ತಲೆಯ ಮೇಲೆ ರೂ 5 ಲಕ್ಷ ಬಹುಮಾನ ಘೋಷಿಸಲಾಗಿದೆ

ಅಷ್ಟಕ್ಕೂ ಈಕೆ ಬೇರೆ ಯಾರೂ ಆಗಿರಲಿಲ್ಲ.  ಪೊಲೀಸ್ ತಂಡವನ್ನು ಮುನ್ನಡೆಸುತ್ತಿದ್ದ ವೆಟ್ಟಿ ರಾಮ ಅವರ ಹಿರಿಯ ಸೋದರಿಯಾಗಿದ್ದಾಳೆ. ಎರಡೂ ಕಡೆಗಳು ಮುಖಾಮುಖಿಯಾದಾಗ ರಾಮ ಮತ್ತು ಕನ್ನಿ ಪರಸ್ಪರ ಎದುರುಬದುರಾದರು. ಅರೆ ಕ್ಷಣದಲ್ಲಿಯೇ ಕನ್ನಿಯ  ಅಂಗರಕ್ಷಕರು ರಾಮ ಅವರತ್ತ ಗುರಿಯಿಟ್ಟು ಗುಂಡು ಹಾರಿಸಲಾರಂಭಿಸಿದಾಗ ಪೊಲೀಸರೂ ಪ್ರತಿದಾಳಿ ನಡೆಸಿದರು. ಈ ಭೀಕರ ಬಂದೂಕಿನ ಕಾಳಗದಲ್ಲಿ ಇಬ್ಬರು ಮಾವೋವಾದಿಗಳು ಹತರಾದರು. ಆದರೆ ಕನ್ನಿ ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾಳೆ.

ಐವತ್ತು ವರ್ಷದ ಕನ್ನಿ ಹಾಗೂ 43 ವರ್ಷದ ರಾಮ ಛತ್ತೀಸಗಢದ ಮಾವೋವಾದಿ ಬಂಡಾಯದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವವರು.

“ಆಕೆಯತ್ತ ಗುಂಡು ಹಾರಿಸುವುದು ನನಗೆ ಬೇಕಿರಲಿಲ್ಲ, ಆದರೆ ಆಕೆಯ ಅಂಗರಕ್ಷಕರು ನನ್ನ ತಂಡದತ್ತ ಗುಂಡಿನ ಮಳೆಗರೆದಾಗ ಗುಂಡು ಹಾರಿಸುವ ಅನಿವಾರ್ಯತೆ ಎದುರಾಯಿತು. ಅರೆ ಕ್ಷಣದಲ್ಲಿ ಆಕೆ ಕಾಡಿನೊಳಗೆ ಮಾಯವಾದಳು'' ಎಂದು ರಾಮ ವಿವರಿಸುತ್ತಾರೆ.

ಕನ್ನಿ ಮಾವೋವಾದಿಗಳ `ಪೊಡಿಯಾರೊ' ಉಸ್ತುವಾರಿಯಾಗಿದ್ದಾಳೆ- ಅಂದರೆ  ಬಂಧಿತ ಮಾವೋವಾದಿಗಳಿಗೆ ಕಾನೂನು ಸಹಾಯವೊದಗಿಸುವ ಜತೆಗೆ  ಪೊಲೀಸ್ ಎನ್‍ಕೌಂಟರ್ ನಲ್ಲಿ ಹತ್ಯೆಗೀಡಾಗುವ ಮಾವೋವಾದಿಗಳ ಕುಟುಂಬಗಳ ಪುನರ್ವಸತಿಯ ಜವಾಬ್ದಾರಿ ಆಕೆಯ ಮೇಲೆ ಇದೆ.

ಕನ್ನಿ ಹಾಗೂ ರಾಮ ಇಬ್ಬರೂ 90ರ ದಶಕದಲ್ಲಿ ತಮ್ಮ ಗಗನಪಲ್ಲಿ ಗ್ರಾಮದ ಇತರ ಯುವಕರೊಂದಿಗೆ ಮಾವೋ ಗುಂಪಿಗೆ ಸೇರಿದ್ದರು, ಆದರೆ ರಾಮ ಆಗಸ್ಟ್ 2018ರಲ್ಲಿ  ಪೊಲೀಸ್ ಇಲಾಖೆಗೆ ಶರಣಾದ ನಂತರ  ಪೊಲೀಸ್ ಇಲಾಖೆ  ಸೇರಿ ರಹಸ್ಯ ಟ್ರೂಪರ್ ಆಗಿದ್ದಾನೆ. ಆತ ಮಾವೋವಾದಿಯಾಗಿದ್ದಾಗ ಆತನ ತಲೆಯ ಮೇಲೂ 6.5 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಆತ ಈಗಾಗಲೇ ಸೋದರಿ ಕನ್ನಿಗೆ ಶರಣಾಗುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಫಲನಾಗಿಲ್ಲ ಎಂದು ಎಸ್‍ಪಿ ಶಲಭ್ ಸಿನ್ಹಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News