ಜಮ್ಮು ಕಾಶ್ಮೀರದಲ್ಲಿ ಈದ್ ಆಚರಣೆಗೆ ಯಾವುದೇ ಸಮಸ್ಯೆಯಾಗದು: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ

Update: 2019-08-08 15:24 GMT

#“ಜಮ್ಮು-ಕಾಶ್ಮೀರ, ಲಡಾಖ್ ನಲ್ಲಿ ಹೊಸ ಯುಗ ಆರಂಭ”

ಹೊಸದಿಲ್ಲಿ, ಆ.8: ಜಮ್ಮು ಕಾಶ್ಮೀರ ಮತ್ತು ಲಡಾಖ್ ನಲ್ಲಿ ಹೊಸ ಯುಗವೊಂದು ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ರಾತ್ರಿ 8 ಗಂಟೆಗೆ ಲೈವ್ ವಿಡಿಯೋದಲ್ಲಿ ಮಾತನಾಡಿದ ಅವರು, 370ನೆ ವಿಧಿಯಿಂದ ಜಮ್ಮು ಕಾಶ್ಮೀರದ ಜನರಿಗೆ ಆದ ಲಾಭವೇನು ಎಂದು ಯಾರೂ ಆಲೋಚಿಸಿರಲಿಲ್ಲ. ಆದರೆ 370ನೆ ವಿಧಿಯ ರದ್ದತಿಯಿಂದ ಜಮ್ಮು ಕಾಶ್ಮೀರದ ಸುಧಾರಣೆಯಾಗಲಿದೆ. ಜೊತೆಗೆ ಇಲ್ಲಿನ ಜನರ ಭವಿಷ್ಯವೂ ಸುರಕ್ಷಿತವಾಗಿರುತ್ತದೆ ಎಂದರು.

 ದೇಶದ ಬೇರೆ ರಾಜ್ಯಗಳಲ್ಲಿ ಮಕ್ಕಳಿಗೆ ಶಿಕ್ಷಣದ ಹಕ್ಕಿದೆ. ಆದರೆ ಜಮ್ಮು ಕಾಶ್ಮೀರದ ಮಕ್ಕಳಿಗೆ ಈ ಹಕ್ಕುಗಳಿಲ್ಲ. ಇದರಿಂದಾಗಿ ಅವರು ಶಿಕ್ಷಣವಂಚಿತರಾಗಿದ್ದಾರೆ. ಬೇರೆ ರಾಜ್ಯಗಳಲ್ಲಿ ಸಫಾಯಿ ಕರ್ಮಚಾರಿಗಳಿಗೆ ಹಕ್ಕಿವೆ. ಆದರೆ ಜಮ್ಮು ಕಾಶ್ಮೀರದಲ್ಲಿ ಈ ಹಕ್ಕುಗಳಿಲ್ಲ. ಇನ್ನು ಮುಂದೆ ರಾಜ್ಯದ ಸಫಾಯಿ ಕರ್ಮಚಾರಿಗಳಿಗೆ, ಪೊಲೀಸರಿಗೆ ಇತರ ಕೇಂದ್ರಾಡಳಿತ ಪ್ರದೇಶಗಳಂತೆಯೇ ಹಲವು ಸವಲತ್ತುಗಳು ಸಿಗಲಿವೆ. ಯುವಜನರಿಗೆ ಉದ್ಯೋಗಾವಕಾಶಗಳು ಸಿಗಲಿವೆ ಎಂದರು.

ನಿಮ್ಮ ಜನಪ್ರತಿನಿಧಿಗಳು ನಿಮ್ಮ ಮೂಲಕವೇ ಆರಿಸಿ ಬರಲಿದ್ದಾರೆ ಎನ್ನುವ ಭರವಸೆಯನ್ನು ನಾನು ಈ ಸಂದರ್ಭ ಜಮ್ಮು ಕಾಶ್ಮೀರದ ಜನರಿಗೆ ನೀಡಲು ಬಯಸುತ್ತೇನೆ. ನಾವೆಲ್ಲಾ ಒಗ್ಗೂಡಿ ಉಗ್ರವಾದ, ಪ್ರತ್ಯೇಕತಾವಾದವನ್ನು ಕೊನೆಗೊಳಿಸಬೇಕಾಗಿದೆ. ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗಳು ನಡೆದಾಗ ನಿಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಿಮಗೆ ಆಯ್ಕೆಗಳಿರಲಿವೆ ಎಂದವರು ಕಾಶ್ಮೀರದ ಜನರಿಗೆ ತಿಳಿಸಿದರು.

ಇನ್ನು ಜಮ್ಮು ಕಾಶ್ಮೀರದ ಜನರು ಉತ್ತಮ ಆಡಳಿತ ಮತ್ತು ಪಾರದರ್ಶಕ ಚುನಾವಣೆ ಎದುರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಾನು ದೇಶದ ಜನರು ಹಾಗು ಕಾಶ್ಮೀರದ ಜನರಿಗೆ ಈದ್ ಶುಭಾಶಯಗಳನ್ನು ತಿಳಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈದ್ ಆಚರಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ ಎಂದರು.

ದೇಶಕ್ಕಾಗಿ ಜಮ್ಮು ಕಾಶ್ಮೀರದ ಜನರು ಪ್ರಾಣ ತೆತ್ತಿದ್ದಾರೆ. ಪೂಂಚ್ ನ ಮೌಲ್ವಿ ಗುಲಾಮ್ ದೀನ್ ಅಶೋಕ ಚಕ್ರ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ರುಕ್ಸಾನಾ ಕೌಸರ್ ಅವರು ಉಗ್ರವಾದಿಯೊಬ್ಬನನ್ನು ಹೊಡೆದುರುಳಿಸಿದ್ದರು. ಉಗ್ರವಾದದ ಹೋರಾಟ ಮುಂದುವರಿಯಲಿ ಎಂದವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News