ಕೇರಳದಲ್ಲಿ ಭಾರೀ ಮಳೆ: 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

Update: 2019-08-08 15:46 GMT

ತಿರುವನಂತಪುರ, ಆ. 8: ಕೇರಳದಲ್ಲಿ ಮಾನ್ಸೂನ್ ಅವಾಂತರ ಸೃಷ್ಟಿಸಿದ್ದು, ರಾಜ್ಯಾದ್ಯಂತ ಭಾರೀ ಮಳೆ ಸುರಿದಿದೆ. ಕೆಲವೆಡೆ ಭೂಕುಸಿತ ಸಂಭವಿಸಿದೆ. ಇಡುಕ್ಕಿ, ಮಲಪ್ಪುರಂ, ಕೋಝಿಕ್ಕೋಡ್ ಹಾಗೂ ವಯನಾಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ರಾಜ್ಯದಾದ್ಯಂತ ನದಿಗಳಲ್ಲಿ ನೀರು ಉಕ್ಕಿ ಹರಿದಿದ್ದು, ನದಿ ತೀರದ ಪ್ರದೇಶಗಳಲ್ಲಿ ನೆರೆ ಸೃಷ್ಟಿಯಾಗಿದೆ.

ಮಣಿಮಾಲಾ, ಮೀನಾಚಲ, ಮೂವತ್ತುಪ್ಪುಳ ಹಾಗೂ ಪಂಬಾದಂತಹ ಪ್ರಮಖ ನದಿಗಳು ತುಂಬಿ ಹರಿಯುತ್ತಿವೆ. ಅಪಾಯಕಾರಿ ಸ್ಥಳಗಳಿಂದ ಜನರನ್ನು ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಕಚೇರಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಕಣ್ಣೂರು, ವಯನಾಡು ಹಾಗೂ ಮಲಪ್ಪುರಂ ಸೇರಿದಂತೆ ಉತ್ತರದ ಜಿಲ್ಲೆಗಳ ಹೆಚ್ಚಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ.

ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿಯಲ್ಲಿ ಮನೆ ಮೇಲೆ ಮರ ಬಿದ್ದ ಪರಿಣಾಮ 50 ವರ್ಷದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಭಾರೀ ಮಳೆಯಿಂದ 10 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಯನಾಡ್, ಕೋಝಿಕೋಡ್, ಮಲಪ್ಪುರಂನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಮಲಪ್ಪುರ ಜಿಲ್ಲೆಯ ಪ್ರಮುಖ ಪಟ್ಟಣವಾದ ನಿಲಂಬೂರು ಜಲಾವೃತವಾಗಿದೆ.

ಕೆಲವು ಕಟ್ಟಡದ ಮೊದಲನೆ ಮಹಡಿ ವರೆಗೆ ನೀರು ವ್ಯಾಪಿಸಿದೆ. ವಾಹನಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಇಲ್ಲಿನ 200 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದೆ. ವಯನಾಡ್‌ನಲ್ಲಿ 16 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. 2,300 ಜನರನ್ನು ಸ್ಥಳಾಂತರಿಸಲಾಗಿದೆ. ಕಣ್ಣೂರು ಜಿಲ್ಲೆಯ ಇರಿಟ್ಟಿ ತಾಲೂಕಿನ ಚಪ್ಪಮಲದಲ್ಲಿ ಭೂಕುಸಿತ ಸಂಭವಿಸಿದೆ. ತಳಿಪರಂಬದ ಹಲವು ಗ್ರಾಮಗಳು ಜಲಾವೃತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News