'ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಮರೋಪಾದಿ ಪರಿಹಾರಕ್ಕೆ ಆಗ್ರಹ'

Update: 2019-08-08 16:55 GMT

ಮಂಗಳೂರು, ಆ.8: ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯಕೈಗೊಂಡು ಸಂತ್ರಸ್ತರ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು ಸೇರಿದಂತೆ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿವೆ.ವೈಮಾನಿಕ ಸಮೀಕ್ಷೆ ನಡೆಸಿ ಮುಖ್ಯಮಂತ್ರಿ ವಸ್ತುಸ್ಥಿತಿ ಪರಿಶೀಲಿಸಿದ್ದರೂ ಆಡಳಿತ ಯಂತ್ರವನ್ನು ಚುರುಕು ಗೊಳಿಸಬೇಕಾಗಿದೆ. ಅಧಿಕಾರಿಗಳು ದಿನದ 24 ಗಂಟೆ ಕೆಲಸ ಮಾಡುವಂತೆ ತಾಕೀತು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಪೂರ್ಣ ಪ್ರಮಾಣದ ಮಂತ್ರಿ ಮಂಡಳ ಅಸ್ವಿತ್ವಕ್ಕೆ ಬಂದಿಲ್ಲ. ಮುಖ್ಯಮಂತ್ರಿಯೊಬ್ಬರೇ ಎಲ್ಲವನ್ನೂ ಮಾಡಬೇಕಾಗಿದೆ. ಸಚಿವರಿದ್ದರೆ ಪರಿಹಾರ ಹಾಗೂ ಪುನರ್ವಸತಿ ಕಾರ್ಯಕ್ಕೆ ವೇಗ ಸಿಗುತ್ತಿತ್ತು. ಆದರೆ ಆಡಳಿತ ಪಕ್ಷದ ಈ ಅತಂತ್ರ ಸ್ಥಿತಿ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ. ಈ ವಿಚಾರದಲ್ಲಿ ಪ್ರತಿಪಕ್ಷಗಳೂ ಕೂಡ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿರುವುದು ದುರಂತದ ಸಂಗತಿ ಎಂದು ಡಾ. ಬೆಳಗಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡುವುದು ಬಿಟ್ಟು, ಆಡಳಿತ ಹಾಗೂ ಪ್ರತಿಪಕ್ಷಗಳು ಸೇರಿ ಪ್ರವಾಹ ಪೀಡಿತ ಪ್ರದೇಶಗಳ ಜನರ ನೆರವಿಗೆ ಧಾವಿಸಬೇಕಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು, ಜನ-ಜಾನುವಾರುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಗಳನ್ನು ಒದಗಿಸಲು ಹಣಕಾಸಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕಾದದ್ದು ಸರಕಾರದ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರದ ನೆರವು ಪಡೆದುಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ಪರಸ್ಪರ ಕೈಜೋಡಿಸಬೇಕು. ತುರ್ತು ಸಂದರ್ಭಗಳಲ್ಲಿ ಹಣ ಖರ್ಚು ಮಾಡಲು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಡಾ.ಬೆಳಗಾಮಿ ಒತ್ತಾಯಿಸಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್‌ನ ಸಮಾಜ ಸೇವಾ ವಿಭಾಗದ ಅಂಗ ಸಂಸ್ಥೆಯಾಗಿರುವ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಸ್ವಯಂ ಸೇವಕರು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಹಾಗೂ ಆಡಳಿತ ಯಂತ್ರದ ಜೊತೆ ಕೈಜೋಡಿಸಲು ಎಚ್‌ಆರ್‌ಎಸ್ ಸದಾ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News