ಮರಗಳನ್ನು ಕಡಿದದ್ದಕ್ಕೆ ಗಳಗಳನೆ ಅತ್ತ ಬಾಲಕಿ ಈಗ ರಾಜ್ಯದ ಹಸಿರು ರಾಯಭಾರಿ!

Update: 2019-08-09 08:22 GMT

ಇಂಫಾಲ್, ಆ.9: ತನ್ನ ಮನೆಯ ಬಳಿ ಹರಿಯುವ ನದಿ ದಂಡೆ ಸಮೀಪ ತಾನು ನೆಟ್ಟ ಎರಡು ಗುಲ್‍ ಮೊಹರ್ ಮರಗಳನ್ನು ಸ್ವಚ್ಛತಾ ಕಾರ್ಯವೊಂದರ ಸಂದರ್ಭ ಕಡಿದರೆಂಬ ಕಾರಣಕ್ಕೆ ಗಳಗಳನೆ ಅತ್ತು ಇಂಟರ್ನೆಟ್ ಸೆನ್ಸೇಶನ್ ಆಗಿದ್ದ ಮಣಿಪುರದ 9 ವರ್ಷದ ಬಾಲಕಿ ಇದೀಗ ರಾಜ್ಯದ ಹಸಿರು ರಾಯಭಾರಿಯಾಗಿ ನೇಮಕಗೊಂಡಿದ್ದಾಳೆ. ರಾಜ್ಯದ ಮುಖ್ಯಮಂತ್ರಿಯ ಗ್ರೀನ್ ಮಣಿಪುರ್ ಮಿಷನ್ ಯೋಜನೆಗೆ ಆಕೆ ಈಗ ಬ್ರ್ಯಾಂಡ್ ಅಂಬಾಸಿಡರ್.

ಎಲಂಗ್ಬಮ್ ಪ್ರೇಮ್ ಕುಮಾರ್ ಹಾಗೂ ಶಾಯಾ ದಂಪತಿಯ ಪುತ್ರಿಯಾಗಿರುವ ವೆಲೆಂಟಿನಾ, ಹಿಯಂಗ್ಲಮ್ ವಬಗೈ ಎಂಬಲ್ಲಿರುವ ಅಮುಟೊಂಬಿ ಡಿವೈನ್ ಲೈಫ್ ಸ್ಕೂಲ್ ಇಲ್ಲಿನ ಐದನೇ ತರಗತಿ ವಿದ್ಯಾರ್ಥಿನಿ. ಆಕೆ ಒಂದನೇ ತರಗತಿಯಲ್ಲಿರುವಾಗ ಎರಡು ಗುಲ್‍ ಮೊಹರ್ ಗಿಡಗಳನ್ನು ನೆಟ್ಟಿದ್ದು, ಅವುಗಳು ಈಗ ಸಾಕಷ್ಟು ದೊಡ್ಡ ಮರವಾಗಿವೆ. ಇತ್ತೀಚೆಗೆ ಅದನ್ನು ಕಡಿದಾಗ ಎಂದು ಅತ್ತಿದ್ದ ವೆಲೆಂಟಿನಾಳ ವೀಡಿಯೋವನ್ನು  ಆಕೆಯ ಮಾವ ಅಂತರ್ಜಾಲದಲ್ಲಿ ಶೇರ್ ಮಾಡಿದ ನಂತರ ಅದು ವೈರಲ್ ಆಗಿತ್ತು.

ಆಕೆಯ ಈ ಪ್ರಕೃತಿ ಪ್ರೇಮ ಮುಖ್ಯಮಂತ್ರಿಯ ಮನಸ್ಸನ್ನೂ ಕರಗಿಸಿತ್ತಲ್ಲದೆ ಅವರು ಆಕೆಯನ್ನು ರಾಜ್ಯದ ಹಸಿರು ರಾಯಭಾರಿಯನ್ನಾಗಿಸಿದ್ದಾರೆ. ಆಕೆ ಒಂದು ವರ್ಷದ ತನಕ ಈ ಹುದ್ದೆಯಲ್ಲಿರಲಿದ್ದು, ತನ್ನ ಮನೆಯ ಸುತ್ತಮುತ್ತ ನೆಡಲು ಹಲವು ಗಿಡಗಳನ್ನು ನೀಡಲಾಗಿದೆ. ಸರಕಾರ ಪ್ರವರ್ತಿತ ಗಿಡ ನೆಡುವ ಕಾರ್ಯಕ್ರಮಗಳಲ್ಲೂ ಆಕೆಯನ್ನು  ಶಾಮೀಲುಗೊಳಿಸಲಾಗುವುದು. ಸರಕಾರಿ ಜಾಹೀರಾತು ಹಾಗೂ ಪ್ರಚಾರಗಳಲ್ಲೂ ಆಕೆ ಕಾಣಿಸಿಕೊಳ್ಳಲಿದ್ದಾಳೆ.

ಆಕೆಗೆ ಸರಕಾರ ಸಂಭಾವನೆಯನ್ನೂ ನೀಡಲಿದ್ದು ಜತೆಗೆ ಸಂಚಾರ  ಸೌಲಭ್ಯ, ವಸತಿ ಹಾಗೂ ಆಹಾರ ಸೌಲಭ್ಯಗಳನ್ನೂ ನೀಡಲಾಗುವುದು.

ಜೂನ್ 22ರಂದು ಆರಂಭಗೊಂಡ ಸರಕಾರದ ಗ್ರೀನ್ ಮಣಿಪುರ್ ಮಿಷನ್ ಅನ್ವಯ ಅರಣ್ಯ ಪ್ರದೇಶಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News