ಸನ್ ಗ್ಲಾಸ್ ಧರಿಸಿದ್ದಕ್ಕೆ ಹಲ್ಲೆಗೊಳಗಾದ ದಲಿತ ಯುವಕನ ಮೇಲೆ ಪ್ರತಿದೂರು: ಬಂಧನ

Update: 2019-08-09 08:48 GMT

ಹೊಸದಿಲ್ಲಿ, ಆ.9: ತಂಪು ಕನ್ನಡಕ (ಸನ್ ಗ್ಲಾಸ್) ಧರಿಸಿದ್ದಾನೆಂಬ ಏಕೈಕ ಕಾರಣಕ್ಕಾಗಿ ಕಳೆದ ಶನಿವಾರ ತಮಿಳುನಾಡಿಕ ಕುಡ್ಡಲೂರು ಜಿಲ್ಲೆಯ ವಿರುದಾಚಲಂ ಎಂಬಲ್ಲಿ  ವಣ್ಣಿಯಾರ್ ಜಾತಿಯ ಕೆಲವರಿಂದ ಹಲ್ಲೆಗೀಡಾಗಿದ್ದ ದಲಿತ ಯುವಕ ಅಜಿತ್ ಕುಮಾರ್ ಎಂಬಾತನನ್ನು ದಾಳಿ ಸಂದರ್ಭ ಪ್ರತಿರೋಧ ತೋರಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣ ಸಂಬಂಧ ಪೊಲೀಸರು ಆರಂಭದಲ್ಲಿ ಅಜಿತ್ ಮೇಲೆ ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದುಕೊಂಡಿದ್ದರೂ, ಅಜಿತ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಗಳು ದೂರಿದ ನಂತರ ಇದೀಗ ಅಜಿತ್ ಬಂಧನವಾಗಿದೆ.

ಇಪ್ಪತ್ತು ವರ್ಷದ ಅಜಿತ್ ಆಲಿಯಾಸ್ ಅಳಗೇಸನ್ ಶನಿವಾರ ತನ್ನ ಅತ್ತಿಗೆಯೊಂದಿಗೆ ಮನೆಯತ್ತ ಬೈಕಿನಲ್ಲಿ  ವರುದಾಚಲಂ ಮೂಲಕ ಸಾಗುತ್ತಿದ್ದಾಗ, ವಣ್ಣಿಯಾರ್ ಜಾತಿಯ ಕೆಲ ಮಂದಿ  ಆತನನ್ನು ತಡೆದು ಆತನ ಸನ್ ಗ್ಲಾಸ್ ತೆಗೆದು ಬೈಕನ್ನು ತಳ್ಳಿಕೊಂಡೇ ಮನೆಗೆ ಹೋಗುವಂತೆ  ಹಾಗೂ  ತಲೆತಗ್ಗಿಸಿ ಸಾಗುವಂತೆ ಹೇಳಿದ್ದರು.

ದಲಿತರು ಫ್ಯಾಶನ್ ಬಟ್ಟೆ ಧರಿಸುವಂತಿಲ್ಲ ಹಾಗೂ ಅವರಿಗಿಂತ ಮೇಲ್ವರ್ಗದವರನ್ನು ಹಾದು ಬೈಕಿನಲ್ಲಿ ಹೋಗುವಂತಿಲ್ಲ ಎಂದು ಆರೋಪಿಗಳಲ್ಲೊಬ್ಬನಾದ ಗೋಪಿ  ಸಂತ್ರಸ್ತನಿಗೆ ಹೇಳಿದ್ದ. ಇದನ್ನು ಗೋಪಿ ವಿರೋಧಿಸಿದಾಗ ಆತ ಆಕೆಯ ಅತ್ತಿಗೆಯ ಬಟ್ಟೆ ಸೆಳೆಯಲು ಯತ್ನಿಸಿದ್ದನೆಂದು ದೂರಲಾಗಿದೆ. ಅಜಿತ್ ಸಹಾಯಕ್ಕಾಗಿ ಬೊಬ್ಬಿಟ್ಟಾಗ ಆರೋಪಿಗಳು ಕಾಲ್ಕಿತ್ತರೂ ನಂತರ ಮನೆಗೆ ಬಂದು ಆತನ ಮೇಲೆ ಹಾಗೂ ತಂದೆಯ ಮೇಲೆ ಹಲ್ಲೆಗೈದಿದ್ದರು. ಮಧ್ಯ ಪ್ರವೇಶಿಸಿದ ಅಜಿತ್ ತಾಯಿ ಮೇಲೆ ಕೂಡ  ಹಲ್ಲೆ ನಡೆಸಲಾಗಿತ್ತೆಂದು ಆರೋಪಿಸಲಾಗಿದೆ.

ಗೋಪಿ ಹಾಗೂ ಇತರ ಐದು ಮಂದಿಯನ್ನು ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯ ಬಂಧಿಸಲಾಗಿತ್ತು. ಆದರೆ ಎರಡು ದಿನಗಳ ನಂತರ ಆರೋಪಿಗಳು ಅಜಿತ್ ತಮ್ಮ ಮೇಲೆ ಹಲ್ಲೆಗೈದಿದ್ದಾನೆಂದು ದೂರಿದ ನಂತರ ಅಜಿತ್ ಕೂಡ ಈಗ ಜೈಲುಪಾಲಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News