ಮಹಿಳೆಯರ ಸುರಕ್ಷೆಗೆ ಸ್ಮಾರ್ಟ್ ಬಳೆ: ಏನಿದರ ವಿಶೇಷ ?

Update: 2019-08-09 10:16 GMT

ಹೈದರಾಬಾದ್: ಮಹಿಳೆಯರ ಸುರಕ್ಷೆ ನಿಟ್ಟಿನಲ್ಲಿ ಕ್ರಾಂತಿಕಾರಕ ಎನ್ನಲಾದ ಸ್ಮಾರ್ಟ್ ಬಳೆಗಳನ್ನು ಇಲ್ಲಿನ ಇಬ್ಬರು ಯುವಕರು ಅಭಿವೃದ್ಧಿಪಡಿಸಿದ್ದಾರೆ.

ಗಾದಿ ಗಿರೀಶ್ (23) ಎಂಬ ಯುವಕ ಹಾಗೂ ಸ್ನೇಹಿತ ಸಾಯಿ ತೇಜಾ ಜತೆಯಾಗಿ ಈ ಸ್ಮಾರ್ಟ್ ಬಳೆ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಧರಿಸಿದ ಮಹಿಳೆಯರಿಗೆ ಯಾವುದೇ ಅಪಾಯ ಎದುರಾದಲ್ಲಿ ಅದು ಶಾಕ್ ಅಲೆ ಸೃಷ್ಟಿಸಿ, ಸಂಬಂಧಿಕರು ಹಾಗೂ ಪೊಲೀಸರಿಗೆ ಲೈವ್ ಲೊಕೇಶನ್ ಹಾಗೂ ಎಚ್ಚರಿಕೆಯನ್ನು ರವಾನಿಸುತ್ತದೆ.

ಇದನ್ನು ಧರಿಸಿದ ಮಹಿಳೆಯರು ತಮ್ಮ ಕೈಯನ್ನು ನಿರ್ದಿಷ್ಟ ಕೋನದಲ್ಲಿ ತಿರುಗಿಸಿದಾಗ ಈ ವಿನೂತನ "ಮಹಿಳೆಯರ ಸ್ವಯಂ ಭದ್ರತಾ ಬಳೆ" ಚಾಲನೆಗೊಳ್ಳುತ್ತದೆ. ಈ ಕೈ ತಿರುಗುವಿಕೆಯು ವಿದ್ಯುತ್ ಶಾಕ್ ಸೃಷ್ಟಿಸಿ, ಮಹಿಳೆಯನ್ನು ಹಿಡಿದ ದಾಳಿಕೋರನಿಗೆ ಶಾಕ್ ಹೊಡೆಯುವಂತೆ ಮಾಡುತ್ತದೆ ಹಾಗೂ ಲೈವ್ ಲೊಕೇಶನ್ ಹಾಗೂ ಎಚ್ಚರಿಕೆ ಸಂದೇಶವನ್ನು ಸಂಬಂಧಿಕರು ಹಾಗೂ ಪೊಲೀಸ್ ಠಾಣೆಗಳಿಗೆ ಕಳುಹಿಸುತ್ತದೆ.

ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಎಲ್ಲ ಸಾಧನಗಳಿಗಿಂತ ಭಿನ್ನ ಎನ್ನುವುದು ಗಾದಿ ಹರೀಶ್ ಅವರ ಹೇಳಿಕೆ.

"ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಹಾಗೂ ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಿನೂತನ ಸಾಧನದ ಮುಖ್ಯ ಪರಿಕಲ್ಪನೆಯೆಂದರೆ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸುವುದು" ಎಂದು ಅವರು ಹೇಳುತ್ತಾರೆ. ಇದೀಗ ಈ ಸುರಕ್ಷಾ ಸಾಧನದ ಮಾದರಿ ಸಿದ್ಧವಾಗಿದ್ದು, ಈ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರದ ನೆರವು ಬೇಕು ಎಂದು ಅವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News