ಚೀನಾ ‘ಕೇಡಿ ದೇಶ’: ಅಮೆರಿಕ

Update: 2019-08-09 15:02 GMT

ವಾಶಿಂಗ್ಟನ್, ಆ. 9: ಹಾಂಕಾಂಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಭೇಟಿಯಾಗಿರುವ ಅಮೆರಿಕದ ರಾಜತಾಂತ್ರಿಕರೊಬ್ಬರ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಗೊಳಿಸಿರುವ ಚೀನಾವು ಕೇಡಿ ದೇಶವಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆಯೊಬ್ಬರು ಬಣ್ಣಿಸಿದ್ದಾರೆ.

 ‘‘ಅಮೆರಿಕದ ರಾಜತಾಂತ್ರಿಕರ ಚಿತ್ರಗಳು, ಅವರ ಮಕ್ಕಳ ಹೆಸರುಗಳು ಸೇರಿದಂತೆ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡುವುದು ಸರಿಯಾದ ಪ್ರತಿಭಟನೆಯಲ್ಲ ಎಂದು ನನಗನಿಸುತ್ತದೆ. ಕೇಡಿ ದೇಶವೊಂದು ಇಂತಹದ್ದನ್ನು ಮಾಡುತ್ತದೆ’’ ಎಂದು ವಕ್ತಾರೆ ಮೋರ್ಗನ್ ಓರ್ಟಗಸ್ ಗುರುವಾರ ಹೇಳಿದರು.

‘‘ಜವಾಬ್ದಾರಿಯುತ ದೇಶವೊಂದು ವರ್ತಿಸುವ ರೀತಿ ಇದಲ್ಲ’’ ಎಂದು ವಿದೇಶಾಂಗ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನುಡಿದರು.

ನೀವು ಚೀನಾವನ್ನು ನೇರವಾಗಿ ‘ಕೇಡಿ ದೇಶ’ ಎಂದು ಕರೆಯುವಿರೇ ಎಂಬ ಪ್ರಶ್ನೆಗೆ ‘‘ಹೌದು’’ ಎಂದು ಅವರು ಉತ್ತರಿಸಿದರು.

ಹಾಂಕಾಂಗ್‌ನಲ್ಲಿರುವ ಅಮೆರಿಕ ಕೌನ್ಸುಲೇಟ್ ಕಚೇರಿಯಲ್ಲಿ ರಾಜಕೀಯ ಸಲಹೆಗಾರಗಾಗಿ ಕೆಲಸ ಮಾಡುತ್ತಿರುವ ಜೂಲೀ ಈಡೇ ಅವರು ಹಾಂಕಾಂಗ್ ಪ್ರತಿಭಟನಕಾರರನ್ನು ಭೇಟಿಯಾದ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು.

ಈಡೇ ಹಾಂಕಾಂಗ್‌ನಲ್ಲಿ ಪ್ರತಿಪಕ್ಷ ನಾಯಕರನ್ನು ಭೇಟಿಯಾಗುತ್ತಿರುವ ಒಂದು ಚಿತ್ರ ಮತ್ತು ಅವರ ಇತರ ಎರಡು ಚಿತ್ರಗಳನ್ನು ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ನಂಟು ಹೊಂದಿರುವ ಹಾಂಕಾಂಗ್‌ನ ‘ಟಾ ಕುಂಗ್ ಪಾವೊ’ ಎಂಬ ಪತ್ರಿಕೆ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News