ಭಾರತ, ಪಾಕ್ ನೇರ ಮಾತುಕತೆಗೆ ಬೆಂಬಲ: ಅಮೆರಿಕ

Update: 2019-08-09 15:09 GMT

ವಾಶಿಂಗ್ಟನ್, ಆ. 9: ಕಾಶ್ಮೀರ ಕುರಿತ ನಮ್ಮ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅಮೆರಿಕ ಶುಕ್ರವಾರ ಹೇಳಿದೆ ಹಾಗೂ ಶಾಂತಿ ಮತ್ತು ಸಂಯಮವನ್ನು ಕಾಯ್ದುಕೊಳ್ಳುವಂತೆ ಭಾರತ ಮತ್ತು ಪಾಕಿಸ್ತಾನಗಳಿಗೆ ಅದು ಕರೆ ನೀಡಿದೆ.

ಕಾಶ್ಮೀರ ಕುರಿತಂತೆ ಅಮೆರಿಕದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿದೆಯೇ ಎಂಬ ವರದಿಗಾರರ ಪಶ್ನೆಯೊಂದಕ್ಕೆ ಉತ್ತರಿಸಿದ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಮೋರ್ಗನ್ ಓರ್ಟಗಸ್ ‘‘ಇಲ್ಲ’’ ಎಂದು ಉತ್ತರಿಸಿದರು.

ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ವಿವಾದವಾಗಿದೆ ಹಾಗೂ ಈ ವಿಷಯಕ್ಕೆ ಸಂಬಂಧಿಸಿದ ಮಾತುಕತೆಗಳ ವೇಗ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವುದು ಈ ಎರಡು ದೇಶಗಳಿಗೆ ಬಿಟ್ಟ ವಿಷಯವಾಗಿದೆ ಎನ್ನುವುದು ಅಮೆರಿಕದ ನಿಲುವಾಗಿದೆ.

‘‘ಅಮೆರಿಕದ ಕಾಶ್ಮೀರ ನೀತಿಯಲ್ಲಿ ಯಾವುದೇ ಬದಲಾವಣೆಯಿದ್ದರೆ, ಅದನ್ನು ನಾನು ಖಂಡಿತವಾಗಿಯೂ ಇಲ್ಲ ಪ್ರಕಟಿಸಲು ಸಾಧ್ಯವಿಲ್ಲ. ಆದರೆ, ಹಾಗಿಲ್ಲ, ಯಾವುದೇ ಬದಲಾವಣೆಯಿಲ್ಲ’’ ಎಂದು ಇನ್ನೊಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಇಲಾಖೆಯ ವಕ್ತಾರೆ ತಿಳಿಸಿದರು.

ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆಯನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಅವರು ನುಡಿದರು.

‘‘ಕಾಶ್ಮೀರ ವಿಷಯದಲ್ಲಿ ಸಂಬಂಧಪಟ್ಟ ಎಲ್ಲ ಪಕ್ಷಗಳು ಶಾಂತಿ ಮತ್ತು ಸಂಯಮವನ್ನು ಕಾಯ್ದುಕೊಳ್ಳುವಂತೆ ನಾವು ಕರೆ ನೀಡುತ್ತೇವೆ. ಅಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸುವುದನ್ನು ನಾವು ಬಯಸುತ್ತೇವೆ. ಹಾಗೂ, ಕಾಶ್ಮೀರ ಮತ್ತು ಸಂಬಂಧಿತ ಇತರ ವಿಷಯಗಳಲ್ಲಿ ನಾವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ನೇರ ಮಾತುಕತೆಯನ್ನು ಖಂಡಿತವಾಗಿಯೂ ಬೆಂಬಲಿಸುತ್ತೇವೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News