ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ 3 ದಿನಗಳ ಪ್ರತಿಭಟನೆ ಆರಂಭ

Update: 2019-08-09 15:30 GMT

ಹಾಂಕಾಂಗ್, ಆ. 9: ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರರು ಮೂರು ದಿನಗಳ ಪ್ರತಿಭಟನಾ ಪ್ರದರ್ಶನಕ್ಕೆ ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಂದ ಅಂತರ್‌ರಾಷ್ಟ್ರೀಯ ಬೆಂಬಲವನ್ನು ಗಳಿಸುವ ಉದ್ದೇಶದಿಂದ ಅವರು ಈ ಚಳವಳಿ ಆರಂಭಿಸಿದ್ದಾರೆ.

ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆಗಾಗಿ ಮಾತೃಭೂಮಿ ಚೀನಾಕ್ಕೆ ಗಡಿಪಾರು ಮಾಡುವ ಮಸೂದೆಯನ್ನು ವಿರೋಧಿಸಿ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಒತ್ತಾಯಿಸಿ ಹಾಂಕಾಂಗ್ ಪ್ರಜೆಗಳು ನಡೆಸುತ್ತಿರುವ ಪ್ರತಿಭಟನೆ ಮೂರನೇ ತಿಂಗಳಿಗೆ ಕಾಲಿಟ್ಟಿದೆ.

‘ಎಚ್‌ಕೆ (ಹಾಂಕಾಂಗ್) ಟು ಫ್ರೀಡಂ’ (ಹಾಂಕಾಂಗ್ ಸ್ವಾತಂತ್ರದತ್ತ) ಮತ್ತು ‘ವಾರ್ಮ್ ಪಿಕಪ್ ಟು ಗೆಸ್ಟ್ಸ್ ಟು ಎಚ್‌ಕೆ’ (ಹಾಂಕಾಂಗ್‌ಗೆ ಬರುವ ಅತಿಥಿಗಳಿಗೆ ಹಾರ್ದಿಕ ಸ್ವಾಗತ) ಎಂಬ ಬರಹಗಳನ್ನು ಹೊಂದಿರುವ ಫಲಕಗಳನ್ನು ಪ್ರತಿಭಟನಕಾರರು ವಿಮಾನ ನಿಲ್ದಾಣದಲ್ಲಿ ಪ್ರದರ್ಶಿಸಿದರು.

 ಆರೋಪಿಗಳನ್ನು ಚೀನಾಕ್ಕೆ ಗಡಿಪಾರು ಮಾಡುವುದನ್ನು ವಿರೋಧಿಸುವುದರಿಂದ ಆರಂಭಗೊಂಡ ಪ್ರತಿಭಟನೆಯು ಬಳಿಕ ವಿಸ್ತೃತ ರೂಪವನ್ನು ಪಡೆದುಕೊಂಡು, ನಗರದಲ್ಲಿ ಕುಂಠಿತಗೊಳ್ಳುತ್ತಿರುವ ಸ್ವಾತಂತ್ರದ ವಿರುದ್ಧ ತಿರುಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News