ಗುಜರಾತ್ ಗಿಂತ ಜಮ್ಮು-ಕಾಶ್ಮೀರ ಅಭಿವೃದ್ಧಿಯಲ್ಲಿ ಮುಂದು: ಅಮಿತ್ ಶಾಗೆ ಆರ್ಥಿಕ ತಜ್ಞ ಜೀನ್ ಡ್ರೆಝ್ ಸವಾಲು
ಹೊಸದಿಲ್ಲಿ, ಆ.9: ಆರ್ಥಿಕ ತಜ್ಞ ಜೀನ್ ಡ್ರೆಝ್ ಅವರು ಇಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಅಂಕಿಅಂಶಗಳನ್ನೊಳಗೊಂಡ ಭಿತ್ತಿಪತ್ರವನ್ನು ಪ್ರದರ್ಶಿಸುವ ಮೂಲಕ ಜಮ್ಮು-ಕಾಶ್ಮೀರವು ಅಭಿವೃದ್ಧಿಯಲ್ಲಿ ಶೇಷ ಭಾರತಕ್ಕಿಂತ ಹಿಂದುಳಿದಿದೆ ಎಂಬ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಸೂಚ್ಯಂಕಗಳ ಆಧಾರದಲ್ಲಿ ಜಮ್ಮು-ಕಾಶ್ಮೀರವು ಹೇಗೆ ಗುಜರಾತನ್ನು ಮೀರಿಸಿದೆ ಎನ್ನುವುದನ್ನು ಡ್ರೆಝ್ ತೋರಿಸಿದ್ದಾರೆ.
ಸೋಮವಾರ ರಾಜ್ಯಸಭೆಯಲ್ಲಿ ಸಂವಿಧಾನದ ವಿಧಿ 35ಎ ಮತ್ತು 370 ರದ್ದತಿಗಳನ್ನು ಘೋಷಿಸಿದ ಸಂದರ್ಭ ಶಾ ಅವರು,ಈ ವಿಧಿಗಳಿಂದಾಗಿಯೇ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ್ದರು.
ಹೆಚ್ಚುಕಡಿಮೆ ಪ್ರತಿಯೊಂದೂ ಆರ್ಥಿಕ ಅಥವಾ ಸಾಮಾಜಿಕ ಸೂಚಿಯಲ್ಲಿ ಜಮ್ಮು-ಕಾಶ್ಮೀರವು ಹೇಗೆ ಗುಜರಾತಿಗಿಂತ ಅದೆಷ್ಟೋ ಮುಂದಿದೆ ಎನ್ನುವುದನ್ನು ಡ್ರೆಝ್ ವಿವರಿಸಿರುವ ವೀಡಿಯೊವೊಂದನ್ನು ಅಂಬೇಡ್ಕರ್ ವಿವಿಯ ವಿದ್ಯಾರ್ಥಿನಿ ಶ್ವೇತಾ ದಾಸ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
1950ರ ದಶಕಗಳಲ್ಲಿ ಕೈಗೊಳ್ಳಲಾಗಿದ್ದ ಭೂ ಸುಧಾರಣೆಗಳು ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಕಾರಣ ಎಂದಿರುವ ಡ್ರೆಝ್,ವಿಧಿ 370 ಈ ಭೂ ಸುಧಾರಣೆಗಳು ಅನುಷ್ಠಾನಗೊಳ್ಳುವಂತೆ ಮಾಡಿತ್ತು ಎಂದಿದ್ದಾರೆ. ಪ್ರಜೆಗಳ ಜೀವಿತಾವಧಿ,ಐದು ವರ್ಷಗಳಿಗಿಂತ ಕಡಿಮೆ ಮಕ್ಕಳ ಸಾವುಗಳ ದರ,ಒಟ್ಟು ಫಲವತ್ತತೆ ದರ,ಎಂಟು ವರ್ಷಗಳ ಶಾಲಾ ಶಿಕ್ಷಣ ಪಡೆದಿರುವ 15ರಿಂದ 19 ವರ್ಷ ವಯೋಮಾನದ ಹೆಣ್ಣುಮಕ್ಕಳ ಶೇಕಡಾವಾರು ಪ್ರಮಾಣ,ಕಡಿಮೆ ತೂಕವನ್ನು ಹೊಂದಿರುವ ಮಕ್ಕಳು, ಪೋಷಕಾಂಶಗಳ ಕೊರತೆಯಿಂದ ಕಡಿಮೆ ದೇಹತೂಕ ಹೊಂದಿರುವ ಮಹಿಳೆಯರು ಮತ್ತು ಎಲ್ಲ ಲಸಿಕೆಗಳನ್ನು ನೀಡಲಾಗಿರುವ ಮಕ್ಕಳಿಗೆ ಸಂಬಂಧಿಸಿದಂತೆ 2015-16ರ ಅಂಕಿಅಂಶಗಳನ್ನು ಅವರು ಉಲ್ಲೇಖಿಸಿದ್ದು,ಈ ಎಲ್ಲ ಸೂಚ್ಯಂಕಗಳಲ್ಲಿ ಜಮ್ಮು-ಕಾಶ್ಮೀರವು ಗುಜರಾತಿಗಿಂತ ಉತ್ತಮ ಸಾಧನೆಯನ್ನು ಮಾಡಿದೆ ಎಂದಿದ್ದಾರೆ. ಅವರು 2011-12ನೇ ಸಾಲಿನ ಗ್ರಾಮೀಣ ಬಡತನ ಮತ್ತು ಗ್ರಾಮೀಣ ಕಾರ್ಮಿಕರ ವೇತನಗಳ ಅಂಕಿಅಂಶಗಳನ್ನೂ ಉಲ್ಲೇಖಿಸಿದ್ದಾರೆ.
ಜಮ್ಮು-ಕಾಶ್ಮೀರವು ತನ್ನದೇ ಆದ ಸಂವಿಧಾನವನ್ನು ಹೊಂದಿತ್ತು ಮತ್ತು ಅದರಿಂದಾಗಿ ಸರಕಾರವು ಯಾವುದೇ ಪರಿಹಾರವನ್ನು ನೀಡದೇ ದೊಡ್ಡ ಜಮೀನುದಾರರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಭೂರಹಿತರಿಗೆ ಹಂಚಲು ಸಾಧ್ಯವಾಗಿತ್ತು ಎನ್ನುವುದು ಮುಖ್ಯ ಅಂಶವಾಗಿದೆ. ಭಾರತದ ಸಂವಿಧಾನದಡಿ ಇದು ಸಾಧ್ಯವಾಗುತ್ತಿರಲಿಲ್ಲ್ಲ ಎಂದು ಡ್ರೆಝ್ ಹೇಳಿದ್ದಾರೆ.