ಬಾಲಕಿ ಮೇಲೆ ದುಷ್ಕರ್ಮಿಗಳಿಂದ ಸರಣಿ ಅತ್ಯಾಚಾರ

Update: 2019-08-09 17:59 GMT

ಹೊಸದಿಲ್ಲಿ, ಆ.9:ಮೇಘಾಲಯ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬ ಮೇಲೆ ನಾಲ್ವರು ದುಷ್ಕರ್ಮಿಗಳು ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಸತತ ಐದು ದಿನಗಳ ಕಾಲ ಅತ್ಯಾಚಾರವೆಸಗಿದ ಘಟನೆ ಶುಕ್ರವಾರ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಪರು ಪುರುಷರನ್ನು ಹಾಗೂ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.

    ಬಾಲಕಿಯು ಜುಲೈ 30ರಂದು ಆರೋಪಿಯೊಬ್ಬನೊಂದಿಗೆ ಆಗಸ್ಟ್ 2ರಂದು ಹೊಸದಿಲ್ಲಿಗೆ ಆಗಮಿಸಿದ್ದಳು. ಗುರುಗ್ರಾಮದಲ್ಲಿ ವೈದ್ಯಕೀಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯು ತನಗೆ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗ ದೊರಕಿಸಿಕೊಡುವ ನೆಪದಲ್ಲಿ ಕರೆತಂದಿದ್ದನೆಂದು ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಆರೋಪಿಯು ತನ್ನನ್ನು ರಾಜೇಂದ್ರ ಪಾರ್ಕ್‌ನಲ್ಲಿ ಆತನ ಗೆಳೆಯರಿಗೆ ಪರಿಚಯಿಸಿದ್ದ. ಅಲ್ಲಿ ತನಗೆ ಮದ್ಯ ಕುಡಿಸಿ, ತನ್ನ ಮೇಲೆ ಅತ್ಯಾಚಾರವೆಸಗಿದನೆಂದು ಬಾಲಕಿಯು ತಿಳಿಸಿರುವುದಾಗಿ ಪೊಲೀಸ್ ಆಯುಕ್ತ ಮುಹಮ್ಮದ್ ಅಖೀಲ್ ಹೇಳಿದ್ದಾರೆ.

  ಆಕೆಯನ್ನು ಅವರು ಐದು ದಿನಗಳಲ್ಲಿ ರಾಜೇಂದ್ರ ಪಾರ್ಕ್ ಸೇರಿದಂತೆ ರಾಜಧಾನಿ ವಿವಿಧೆಡೆ ಅತ್ಯಾಚಾರವೆಸಗಿದ್ದರು. ಮಂಗಳವಾರ ಬಾಲಕಿಯು ತನಗೆ ರಾಜಧಾನಿಯಲ್ಲಿ ನೆಲೆಸಿರುವ ಇಬ್ಬರು ದೀರ್ಘಕಾಲದ ಪರಿಚಿತರಿಗೆ ಕರೆ ಮಾಡಿ ತನ್ನ ದುಸ್ಥಿತಿಯನ್ನು ವಿವರಿಸಿದಳೆಂದು ಅಖಿಲ್ ವಿವರಿಸಿದ್ದಾರೆ. ಬಾಲಕಿಯು ಆಘಾತಕ್ಕೊಳಗಾದ ಸ್ಥಿತಿಯಲ್ಲಿದ್ದು, ಆಕೆಯಿಂದ ಘಟನಾವಳಿಗಳ ಬಗ್ಗೆ ಕೂಲಂಕಶ ವಿವರಗಳನ್ನು ಪೊಲೀಸರು ಇನ್ನಷ್ಟೇ ಪಡೆಯಬೇಕಾಗಿದೆಯೆಂದು ಅವರು ತಿಳಿಸಿದರು.

   ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರು ವೈದ್ಯಕೀಯ ಸಹಾಯಕರನ್ನು ಬಂಧಿಸಲಾಗಿದೆ ಬಾಲಕಿಯನ್ನು ನಗರಕ್ಕೆ ಕರೆತಂದ ವ್ಯಕ್ತಿ ಸೇರಿದಂತೆ ಇಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News