×
Ad

ಥಾರ್ ಎಕ್ಸ್‌ಪ್ರೆಸ್ ರೈಲು ಕೂಡಾ ಸ್ಥಗಿತ: ಪಾಕ್ ಘೋಷಣೆ

Update: 2019-08-09 23:40 IST

 ಹೊಸದಿಲ್ಲಿ,ಆ.9: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಭಾರತ ಸರಕಾರದ ಕ್ರಮವನ್ನು ಪ್ರತಿಭಟಿಸಿ,ಪಾಕಿಸ್ತಾನವು ಶುಕ್ರವಾರ ಭಾರತಕ್ಕೆ ಸಂಚರಿಸುವ ಥಾರ್ ಎಕ್ಸ್‌ಪ್ರೆಸ್ ರೈಲು ಯಾನ ಸೇವೆಯನ್ನು ಕೂಡಾ ರದ್ದುಪಡಿಸಿದೆ. ಪಾಕಿಸ್ತಾನವು ಲಾಹೋರ್ ಹಾಗೂ ದಿಲ್ಲಿ ನಡುವೆ ಸಂಚರಿಸುವ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಗುರುವಾರ ಅಮಾನತುಗೊಳಿಸಿತ್ತು.

 ‘‘ಥಾರ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕೂಡಾ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ’’ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್, ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.‘ಥಾರ್ ಎಕ್ಸ್‌ಪ್ರೆಸ್’ ಪಾಕಿಸ್ತಾನದ ಖೊಕ್ರಾಪಾರ್ ಹಾಗೂ ಭಾರತದ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿನ ಮನಾಬಾವೊ ನಡುವೆ ವಾರದಲ್ಲಿ ಒಂದು ಬಾರಿ ಸಂಚರಿಸುತ್ತದೆ.

    ನಾನು ರೈಲ್ವೆ ಸಚಿವನಾಗಿರುವವರೆಗೆ ಪಾಕ್ ಹಾಗೂ ಭಾರತ ನಡುವೆ ಯಾವುದೇ ರೈಲು ಕಾರ್ಯಾಚರಿಸದು ಎಂದು ರಶೀದ್ ಹೇಳಿದರು. ರಶೀದ್ ಅಹ್ಮದ್ ಅವರು ಗುರುವಾರ ಹೇಳಿಕೆ ನೀಡಿ, 1976ರಲ್ಲಿ ಆರಂಭಿಸಲಾದ ಸಂರೆತಾ ಎಕ್ಸಪ್ರೆಸ್ ರೈಲು ಸೇವೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದ್ದರು.

ಗೂಢಚರ್ಯೆ ಆರೋಪದಲ್ಲಿ ಪಾಕ್‌ನ ಮಿಲಿಟರಿ ನ್ಯಾಯಾಲಯದಿಂದ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕವನ್ನು ಒದಗಿಸುವ ಬಗ್ಗೆ ಹೊಸದಿಲ್ಲಿ ಜೊತೆ ಮಾತುಕತೆಗಳನ್ನು ಕೂಡಾ ಪಾಕಿಸ್ತಾನದ ರದ್ದುಪಡಿಸಿದೆ. ಇದುವೇಳೆ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಕೂಡಾ ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News