ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಿಂದ ಸೋನಿಯಾ, ರಾಹುಲ್ ಹೊರಕ್ಕೆ
Update: 2019-08-10 14:28 IST
ಹೊಸದಿಲ್ಲಿ, ಆ.10:ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿಯಲಿದ್ದಾರೆ.
ಇಂದು ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆುಯನ್ನು ಈಶಾನ್ಯ, ಪೂರ್ವ, ಉತ್ತರ, ಪಶ್ಚಿಮ ಮತ್ತು ದಕ್ಷಿಣ ಸೇರಿದಂತೆ 5 ವಲಯಗಳ ನಾಯಕರಿಗೆ ಬಿಟ್ಟುಕೊಡಲಾಗಿದ್ದು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಮಿತಿಯಲ್ಲಿ ಇಲ್ಲ. ಸಿಡಬ್ಲ್ಯುಸಿ ಸಭೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆಯ ಜವಾಬ್ದಾರಿಯನ್ನು ಐದು ವಲಯಗಳ ನಾಯಕರಿಗೆ ಒಪ್ಪಿಸಿದ ಬೆನ್ನಲ್ಲೇ ಸಭೆಯಿಂದ ಅವರು ಹೊರ ನಡೆದರು.
ಸಿಡಬ್ಲ್ಯುಸಿ ಸಭೆಯು ರಾಹುಲ್ ಗಾಂಧಿ ಅವರನ್ನು ಮರಳಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವಂತೆ ಕೇಳಿದ್ದರೂ ಅವರು ಅದಕ್ಕೆ ಒಪ್ಪಲಿಲ್ಲ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಇಂದು ರಾತ್ರಿ ಮತ್ತೊಮ್ಮೆ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.