ಸ್ವಾತಂತ್ರ್ಯ ದಿನದ ಮೆಸೇಜ್: ನಿಮ್ಮ ಬೆರಳಚ್ಚಿನ ಮೂಲಕ ಬ್ಯಾಂಕ್ ಮಾಹಿತಿ ಕದಿಯಲು ಸಾಧ್ಯವೇ?

Update: 2019-08-10 12:35 GMT

ಸ್ವಾತಂತ್ರ್ಯ ದಿನ ಹಾಗೂ ಹೊಸ ವರ್ಷಕ್ಕೆ ಶುಭಾಶಯ ಕೋರುವ ಮೆಸೇಜುಗಳನ್ನು ಅನ್‍ ಲಾಕ್ ಮಾಡಲು ಹೇಳುವ ವಾಟ್ಸ್ಯಾಪ್ ಸಂದೇಶಗಳ ಮೇಲೆ ನಿಮ್ಮ  ಹೆಬ್ಬೆರಳು ಇರಿಸಿದ ಕೂಡಲೇ ನಿಮ್ಮ ಬಯೋಮೆಟ್ರಿಕ್ ಡಾಟಾ ಇನ್ನೊಬ್ಬರಿಗೆ ಲಭ್ಯವಾಗುತ್ತದೆ ಎಂದು ಹೇಳುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೆಬ್ಬೆರಳನ್ನು ಆ ಮೆಸೇಜ್ ಮೇಲಿರಿಸಿದ ಕೂಡಲೇ ಪಾನ್ ಹಾಗೂ ಆಧಾರ್ ಕಾರ್ಡ್ ಗಳು ಮತ್ತು ಬ್ಯಾಂಕುಗಳಿಗೆ ಸಂಬಂಧಿಸಿದ ಡಾಟಾವನ್ನು ಕದಿಯಬಹುದೆಂದು ಈ ಸಂದೇಶ ಹೇಳುತ್ತಿದೆ.

ಆ ಸಂದೇಶ ಹೀಗಿದೆ: “ನನ್ನ ಎಲ್ಲಾ ಗೆಳೆಯರಿಗೆ, ಸ್ವಾತಂತ್ರ್ಯ ದಿನ ಹಾಗೂ ಹೊಸ ವರ್ಷದ ಶುಭಾಶಯ ಕೋರುವ ಮೆಸೇಜ್ ಅನ್‍ ಲಾಕ್ ಮಾಡಲು ನಿಮ್ಮ ಹೆಬ್ಬೆರಳನ್ನು ಸಂದೇಶದ ಮೇಲಿಡುವಂತೆ ಹೇಳುವ ಮೆಸೇಜ್ ಗಳ ಬಗ್ಗೆ  ಎಚ್ಚರವಿರಲಿ. ನಿಮ್ಮ ಹೆಬ್ಬೆಟ್ಟು ಸ್ಕ್ಯಾನ್ ಮಾಡಿದ್ದೇ ಆದಲ್ಲಿ ನಿಮ್ಮ ಬಯೋಮೆಟ್ರಿಕ್ ಡಾಟಾ ಆ್ಯಪ್ ಮಾಲಕರಿಗೆ ಲಭ್ಯವಾಗಬಹುದು. ಇದು ಗಂಭೀರ ವಿಚಾರ. ನಿಮ್ಮ ಆಧಾರ್ ಬಯೋಮೆಟ್ರಿಕ್  ಪ್ಯಾನ್, ಬ್ಯಾಂಕ್ ಇತ್ಯಾದಿಗಳ ಜತೆ ಜೋಡಣೆಯಾಗಿದೆ, ಜಾಗರೂಕರಾಗಿರಿ, ಸೈಬರ್ ಅಪರಾಧ ಹೆಚ್ಚಾಗುತ್ತಿದೆ #ಟ್ರಾಯ್''  ಎಂದು ಬರೆಯಲಾಗಿದೆ.

ಹಲವು ಟ್ವಿಟರಿಗರು ಇದೇ ಮೆಸೇಜ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ thequint.com ವೆಬ್ ತಾಣ ಸೈಬರ್ ತಜ್ಞ ಜಿತೇನ್ ಜೈನ್  ಅವರನ್ನು ಸಂಪರ್ಕಿಸಿದಾಗ ಈ ಸಂದೇಶ ಸಂಪೂರ್ಣ ಸುಳ್ಳು ಎಂದು ಅವರು ಹೇಳಿದ್ದಾರೆ.

“ತಾಂತ್ರಿಕವಾಗಿ ಹೇಳುವುದಾದರೆ ಕೇವಲ ಒಂದು ಮೆಸೇಜ್ ಮುಟ್ಟಿದ ಮಾತ್ರಕ್ಕೆ ಒಂದು ಆ್ಯಪ್  ನಿಮ್ಮ ಬಯೋಮೆಟ್ರಿಕ್ ಡಾಟಾ ಹಾಗೂ ಖಂಡಿತವಾಗಿಯೂ ಪಾನ್ ಮತ್ತು ಆಧಾರ್ ಕಾರ್ಡ್ ಮಾಹಿತಿಗಳನ್ನು ಕದಿಯಲು ಸಾಧ್ಯವಿಲ್ಲ'' ಎಂದು ಅವರು ವಿವರಿಸಿದ್ದಾರೆ.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News