ಲಾಹೋರ್-ದಿಲ್ಲಿ ಬಸ್ ಸೇವೆ ಸ್ಥಗಿತಗೊಳಿಸಿದ ಪಾಕ್

Update: 2019-08-10 16:08 GMT

ಲಾಹೋರ್, ಆ. 10: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ಹಿಂದಕ್ಕೆ ಪಡೆದುಕೊಂಡ ಬಳಿಕ, ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಪಾಕಿಸ್ತಾನ ಮುಂದುವರಿಸಿದೆ.

 ಭಾರತ ಮತ್ತು ಪಾಕಿಸ್ತಾನಗಳ ನಡುವೆ ಓಡುವ ಸಂಝೋಕಾ ಎಕ್ಸ್‌ಪ್ರೆಸ್ ರೈಲನ್ನು ರದ್ದು ಪಡಿಸಿದ ಒಂದು ದಿನದ ಬಳಿಕ, ಪಾಕಿಸ್ತಾನವು ಶುಕ್ರವಾರ ಲಾಹೋರ್-ದಿಲ್ಲಿ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ.

‘‘ರಾಷ್ಟ್ರೀಯ ಭದ್ರತಾ ಸಮಿತಿ ನಿರ್ಧಾರಗಳಿಗೆ ಅನುಗುಣವಾಗಿ, ಪಾಕಿಸ್ತಾನ-ಭಾರತ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ’’ ಎಂದು ಪಾಕಿಸ್ತಾನದ ಸಂಪರ್ಕ ಮತ್ತು ಅಂಚೆ ಸೇವೆಗಳ ಸಚಿವ ಮುರಾದ್ ಸಯೀದ್ ಟ್ವಿಟರ್‌ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಈ ಬಸ್ ಸೇವೆಯನ್ನು 1999 ಫೆಬ್ರವರಿ 19ರಂದು ಆರಂಭಿಸಲಾಗಿತ್ತು. ಅದರ ಉದ್ಘಾಟನಾ ಪ್ರಯಣದಲ್ಲಿ ಬಸ್‌ನಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲಾಹೋರ್‌ಗೆ ಪ್ರಯಾಣಿಸಿದ್ದರು. ಅವರು ಲಾಹೋರ್‌ನಲ್ಲಿ ಸಮ್ಮೇಳನವೊಂದರಲ್ಲಿ ಭಾಗವಹಿಸಬೇಕಾಗಿತ್ತು. ಅವರನ್ನು ಪಾಕಿಸ್ತಾನದ ವಾಘಾ ಗಡಿಯಲ್ಲಿ ಅಂದಿನ ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್ ಸ್ವಾಗತಿಸಿದ್ದರು.

ದಿಲ್ಲಿ ಗೇಟ್ ಸಮೀಪದ ಅಂಬೇಡ್ಕರ್ ಸ್ಟೇಡಿಯಮ್ ಟರ್ಮಿನಲ್‌ನಿಂದ ಬಸ್ ಮೊದಲ ಯಾನವನ್ನು ಮಾಡಿತ್ತು. 2001ರಲ್ಲಿ ಭಾರತೀಯ ಸಂಸತ್ ಮೇಲೆ ನಡೆದ ದಾಳಿಯ ಬಳಿಕ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ನಂತರ 2003 ಜುಲೈಯಲ್ಲಿ ಬಸ್ ಸೇವೆಯನ್ನು ಪುನರಾರಂಭಿಸಲಾಗಿತ್ತು.

ಶುಕ್ರವಾರದವರೆಗೂ ಈ ಬಸ್‌ಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗುತ್ತಿದ್ದವು ಹಾಗೂ ಅಲ್ಲಿಂದ ಬರುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News