ಬಂಟ್ವಾಳದಲ್ಲಿ ಜಲಾವೃತ: ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತ

Update: 2019-08-10 17:26 GMT

ಬಂಟ್ವಾಳ, ಆ. 10: ಸುಮಾರು 4 ದಶಕಗಳ ಬಳಿಕ ಪ್ರವಾಹದಿಂದ ಬಂಟ್ವಾಳದ ವಿವಿಧ ಪ್ರದೇಶಗಳು ದ್ವೀಪವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಶನಿವಾರ ಮುಂಜಾನೆ 11.7 ಮೀಟರ್ ಮಟ್ಟದಲ್ಲಿ ಬೋರ್ಗರೆಯುತ್ತಿದ್ದ ನೇತ್ರಾವತಿ ನದಿಯು ರಾತ್ರಿಯ ವೇಳೆ 10.8 ಮೀ. ಮಟ್ಟದಲ್ಲಿ ಅಪಾಯಕಾರಿ ಮಟ್ಟದಲ್ಲಿಯೇ ಹರಿಯುತ್ತಿತ್ತು.

ಶುಕ್ರವಾರ ರಾತ್ರಿ ವೇಳೆ ಸಿಡಿಲಿನೊಂದಿಗೆ ಭಾರೀ ಮಳೆಯಾಗಿದ್ದು, ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ಬಂಟ್ವಾಳ ನಗರವನ್ನು ಪ್ರವೇಶಿಸುವ ಬಡ್ಡಕಟ್ಟೆ, ಕೊಟ್ರಮಣಗಂಡಿ, ಬಸ್ತಿಪಡ್ಪು ಭಾಗದಲ್ಲಿ ರಸ್ತೆಯು ಜಲಾವೃತಗೊಂಡು ಶನಿವಾರ ಸಂಜೆಯವರೆಗೂ ಬಂಟ್ವಾಳ ನಗರ ಪ್ರದೇಶ ದ್ವೀಪದಂತಾಗಿತ್ತು. ಬಡ್ಡಕಟ್ಟೆ, ಬಸ್ತಿಪಡ್ಪು, ಕೊಟ್ರಮಣಗಂಡಿಯಾಗಿ ಬರುವಂತ ಎಲ್ಲ ವಾಹನಗಳು ಏಕೈಕ ಪರ್ಯಾಯ ರಸ್ತೆಯಾದ ಬಂಟ್ವಾಳ ನೆರೆವಿಮೋಚನಾ ರಸ್ತೆಯನ್ನು ಬಳಸಿಕೊಂಡು ಬಂಟ್ವಾಳ ನಗರವನ್ನು ಪ್ರವೇಶಿಸಿದ್ದವು.

ನೀರು ಏರಿಕೆಯಾಗಿ ರಾತ್ರೋರಾತ್ರಿ ಬಂಟ್ವಾಳದ ಹಲವಾರು ಮನೆಗಳಿಗೆ ನುಗ್ಗಿದೆ. ಶುಕ್ರವಾರ ತಾಲೂಕಿನ 54 ಮನೆಗಳು ಜಲಾವೃತಗೊಂಡಿದ್ದರೆ, ಇಂದು ಬೆಳಗ್ಗೆ ಈ ಸಂಖ್ಯೆ 200ಕ್ಕೂ ಹೆಚ್ಚಿನ ಮನೆಗಳಿಗೆ ನುಗ್ಗಿದೆ. ಪರಿಣಾಮ ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಇವುಗಳಲ್ಲಿ ನೆರೆಪೀಡಿತ ಪ್ರದೇಶಗಳಾದ ಆಲಡ್ಕ-ಬೋಗೋಡಿ ಪ್ರದೇಶದಲ್ಲಿ 70 ಮೆನಗಳು, 2 ಮಸೀದಿ, ಬಿ.ಮೂಡ ಗ್ರಾಮದ ತಲಪಾಡಿಯಲ್ಲಿ 14 ಮನೆಗಳು, ನಂದರಬೆಟ್ಟು ಪ್ರದೇಶದಲ್ಲಿ 40 ಮನೆಗಳಿಗೆ, ಭಂಡಾರಿಬೆಟ್ಟು 15 ಮನೆಗಳು ಜಲಾವೃತಗೊಂಡರೆ, ವಿವಿಧ ಪ್ರದೇಶಗಳ ಮನೆ, ಅಂಗಡಿ, ವಾಣಿಜ್ಯ-ವಸತಿ ಸಂಕೀರ್ಣಗಳಿಗೆ ಕೃತಕ ನೆರೆ ಬಂದಿದೆ. ಈ ನಡುವೆ ತಾಲೂಕಿನಲ್ಲಿ ಐ.ಬಿ. ಮತ್ತು ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅದೇ ರೀತಿ ನೆರೆ ಮನೆಗಳು ಹೊರತುಪಡಿಸಿ 10 ಮನೆಗಳು ಹಾನಿಯಾಗಿ ನಷ್ಟ ಸಂಭವಿಸಿದೆ.

ನೆರೆ ನೋಡಲು ಕುತೂಹಲಿಗರ ದಂಡು:

ಬಡ್ಡಕಟ್ಟೆಯಿಂದ ಮಾರ್ಕೆಟ್ ರಸ್ತೆಯದ್ದಕ್ಕು ಇರುವ ಅಂಗಡಿಯೊಳಗೆ ನೀರು ನುಗ್ಗಿದ್ದು, ವರ್ತಕರು ತಮ್ಮ ಸಾಮಾಗ್ರಿಗಳನ್ನು ಖಾಲಿ ಮಾಡಬೇಕಾಯಿತು. ಬಂಟ್ವಾಳ ಪೇಟೆ ಪ್ರವಾಹದಿಂದಾಗಿ ದ್ವೀಪವಾದ ಸುದ್ದಿಯಾಗುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಕುತೂಹಲಿಗರು ಶನಿವಾರ ಬೆಳಗ್ಗಿನವರೆಗೂ ಅಗಮಿಸಿ ನೇತ್ರಾವತಿಯ ಪ್ರವಾಹದ ಅಬ್ಬರವನ್ನು ವೀಕ್ಷಿಸುತ್ತಿದ್ದರು.

ದಾಖಲೆ ನಿರಿನ ಮಟ್ಟ:

1974ರ ಪ್ರವಾಹದ ಬಳಿಕ ಸಾಕಷ್ಟು ಬಾರಿ ಪ್ರವಾಹ ಬಂದಿತ್ತಾದರೂ, 1983ರಲ್ಲಿ ಬಂದಿದ್ದ ಪ್ರವಾಹ ಇದೇ ರೀತಿಯಾಗಿ ಬಂದಿರುವ ಬಗ್ಗೆ ಹಿರಿಯರು ಮಾಹಿತಿ ನೀಡಿದ್ದಾರೆ. ಆಗ ಬಂಟ್ವಾಳ ನಗರ ದ್ವೀಪವಾಗಿ ಕಾಣಿಸಿಕೊಂಡಿತ್ತು. ಆ ಬಳಿಕ ಆಗಿನ ದಾಖಲೆಯನ್ನು ಮೀರಿ 11.7 ಮೀ.ನಷ್ಟು ಪ್ರಮಾಣದಲ್ಲಿ ನೇತ್ರಾವತಿ ಉಕ್ಕಿ ಹರಿದಿದ್ದು, ಮತ್ತೊಮ್ಮೆ ಪ್ರವಾಹದಿಂದ ಬಂಟ್ವಾಳ ದ್ವೀಪವಾಗಿದೆ.

ಬೆಳಗ್ಗಿನಿಂದ ಇಳಿಮುಖ:

ಶನಿವಾರ ಬೆಳಗ್ಗೆ ಭಾರೀ ಗಾಳಿ- ಮಳೆಯ ಅಬ್ಬರವಿದ್ದರೂ, ಸುಮಾರು 6 ಗಂಟೆಯ ನಂತರ ಪ್ರವಾಹದ ಅಬ್ಬರ ಇಳಿಮುಖವಾಗ ತೊಡಗಿತು. ಕಳೆದ ವರ್ಷ ನೇತ್ರಾವತಿ ನದಿ ಅಪಾಯದಮಟ್ಟವನ್ನು ಮೀರಿ ಅಂದರೆ, 10.7 ಮೀ.ನಲ್ಲಿ ಹರಿದಿತ್ತು. ಆದರೆ, ಇದೀಗ ಕಳೆದ ವರ್ಷದ ದಾಖಲೆಯನ್ನು ಮುರಿದು 11.7 ಮೀ.ನಷ್ಟು ನೇತ್ರಾವತಿ ನದಿ ನೀರು ಹರಿದಿದೆ.

ಪೂಜಾರಿ ಮನೆ ಜಲಾವೃತ: 

ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಬಿ.ಮೂಡ ಗ್ರಾಮದ ಗಾಣದಪಡ್ಪು ಬಳಿರುವ ಮನೆಗೂ ನೆರೆ ನೀರು ನುಗ್ಗಿದ್ದು, ಜನಾರ್ದನ ಪೂಜಾರಿಯವರ ಸಹಿತ ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಂಟ್ವಾಳ ಬಂಟರ ಭವನದ ತಳಭಾಗ ಜಲಾವೃತಗೊಂಡರೆ, ತಲಪಾಡಿ ಡೈಮೆಂಡ್ ಸ್ಕೂಲ್, ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರಕ್ಕೂ ನೀರು ನುಗ್ಗಿತ್ತು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿರುವ ಸರ್ವೀಸ್ ರಸ್ತೆ ಜಲಾವೃತಗೊಂಡ ಹಿನ್ನಲೆಯಲ್ಲಿ, ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ವಾಹನಗಳ ಓಡಾಟ ವಿರಳ:

ಪ್ರವಾಹದ ಹಿನ್ನಲೆಯಲ್ಲಿ ಆಟೋರಿಕ್ಷಾ,ಬಸ್ ಗಳ ಓಡಾಟ ಕಡಿಮೆ ಇತ್ತು.ಹಾಗೆಯೇ ತಿಂಗಳ ಎರಡನೆ ಶನಿವಾರ ರಜೆ ಇದ್ದುದರಿಂದ ಜನಸಂಚಾರವು ವಿರಳವಾಗಿತ್ತು.ಬಂಟ್ವಾಳ ಪ್ರವಾಸಿ ಮಂದಿರ ಹಾಗೂ ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಗಂಜಿಕೇಂದ್ರ ತೆರೆಯಲಾಗಿದ್ದು, ಕೆಲವರು ತಮ್ಮ ಸಂಬಂಧಿಕರ ಮನೆಗಳಇಗೆ ತೆರಳಿದರೆ, ಉಳಿದವರು ಗಂಜಿಕೇಂದ್ರದಲ್ಲಿ ತಂಗಿದ್ದರು. ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ತಂಡ ಗಂಜಿಕೇಂದ್ರಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದರು. 

ತಡರಾತ್ರಿವರೆಗೂ ಮೊಕ್ಕಾಂ:

ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ ಹಾಗೂ ಅಧಿಕಾರಿಗಳ ತಂಡ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಂಡರಲ್ಲದೆ ತಡರಾತ್ರಿವರೆಗೂ ಬಿ.ಸಿ.ರೋಡಿನಲ್ಲಿರುವ ತಮ್ಮ ಕಾರ್ಯಾಲಯದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಖುದ್ದು ಹಾಜರಿದ್ದು, ಅಧಿಕಾರಿಗಳ ಸಂಪರ್ಕದಲ್ಲಿದ್ದರಲ್ಲದೆ, ಸಲಹೆ ಸೂಚನೆಗಳನ್ನು ನೀಡುತ್ತಲೇ ಇದ್ದರು. 

ಯಾವುದೇ ಪ್ರಾಣಹಾನಿ ಇಲ್ಲ:

ಕಳೆದ ಏಳು ದಿನಗಳಿಂದ ಹಗಲೂ ರಾತ್ರಿ ತಾಲೂಕಾಡಳಿತ ತಹಶಿಲ್ದಾರ್ ರಶ್ಮಿ ಎಸ್. ಆರ್ ನೇತೃತ್ವದಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಮೆಚ್ಚುಗೆಗೆ ಪಾತ್ರವಾಗಿದೆ. ಮಳೆಯಿಂದ ಸಂಭಾವ್ಯ ಅನಾಹುತಗಳಾಗುವ ಸ್ಥಳಗಳನ್ನು ಗುರುತಿಸಿ ಅವರಿಗೆ ಎಚ್ಚರಿಕೆಯನ್ನು ನೀಡಲಾಯಿತು. ಗಮಳೆ ತೀವ್ರಗೊಂಡ ಸಂದರ್ಭ ಖುದ್ದು ತಹಶೀಲ್ದಾರ್ ಹಗಲು, ರಾತ್ರಿ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಸುರಕ್ಷತೆಯ ಕುರಿತು ಕಾಳಜಿ ವಹಿಸಿದ್ದರು. ಇವರೊಂದಿಗೆ ಪುರಸಭೆಯ ಸಿಬ್ಬಂದಿ ಗಂಜಿಕೇಂದ್ರಗಳ ಉಸ್ತುವಾರಿಯನ್ನೂ ನೋಡಿಕೊಂಡರು. ದ.ಕ.ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಮತ್ತು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಂಡರು. ಸುರಿಯುವ ಮಳೆಗೂ ತಾಲೂಕಾಡಳಿತ ನಡೆಸಿದ ಪರಿಹಾರ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾದವು. ಇಲಾಖೆಯ ಅಧಿಕಾರಿಗಳಾದ ರಾಮಕಾಟಿಪಳ್ಳ, ನವೀನ ಬೆಂಜನಪದವು, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್, ಯತೀಶ್, ಪುರಸಭೆಯ ಸಿಬ್ಬಂದಿ ಇಕ್ಬಾಲ್, ಮೋಹನ್ ಭಟ್, ಡೊಮೆನಿಕ್ ಡಿಮೆಲ್ಲೊ ಮತ್ತಿತರರು ವಿವಿಧ ಕೇಂದ್ರಗಳ ಉಸ್ತುವಾರಿ ನೋಡಿಕೊಂಡರು. 

ಹೆಲ್ಪ್ ಲೈನ್:

ಶಾಸಕ ಯು.ರಾಜೇಶ್ ನಾಯ್ಕ್ ಅವರು ಸಂತ್ರಸ್ತರ ತುರ್ತು ನೆರವಿಗಾಗಿ ಬಿ.ಸಿ.ರೋಡಿನಲ್ಲಿರುವ ತಮ್ಮ ಕಾರ್ಯಾಲಯದಲ್ಲಿ  24*7 ಹೆಲ್ಪ್ ಲೈನ್ ತೆರೆಯಲಾಗಿದೆ. ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೊಳಗಾಗುವ ಸಂತ್ರಸ್ಥರು ಯಾವುದೇ ಸಮಸ್ಯೆ ಉಂಟಾದರೆ ಬಂಟ್ವಾಳ ಶಾಸಕರ ಕಚೇರಿಯ ದೂರವಾಣಿ ಸಂಖ್ಯೆ 08255 298613,98450 83470, 9901810250, 9448122501, ನಂಬರ್‍ಗೆ ಕರೆ ಮಾಡುವಂತೆ ಹಾಗೂ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ವಿದ್ಯುತ್ ಇಲ್ಲದೆ ಪರದಾಟ: 

ಗಾಳಿ,ಮಳೆ,ಪ್ರವಾಹದ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ 8 ಗಂಟೆಯವೇಳೆಗೆ ಕಡಿತಗೊಂಡ ವಿದ್ಯುತ್ ಶನಿವಾರ ಸಂಜೆಯವರೆಗೂ ಬಂದಿರಲಿಲ್ಲ. ಪ್ರವಾಹದಿಂದಾಗಿ ಬಂಟ್ವಾಳದ ಕೆಲವೆಡೆ ಟ್ರಾನ್ಸ್ ಫಾರ್ಮರ್‍ಗೆ ಹಾನಿ, ಮುಳುಗಡೆಯಾದ ಬಗ್ಗೆ ವರದಿಯಾಗಿದೆ.
ನದಿಯ ಅಪಾಯದ ಮಟ್ಟ 8.5 ಆಗಿದ್ದು, ಶುಕ್ರವಾರ ತಡರಾತ್ರಿ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 11.7 ಮೀಟರ್ ಇತ್ತು. ಮುಂಜಾನೆ 11.6 ಮೀ.ನಲ್ಲಿ ಹರಿಯುತ್ತಿದೆ. ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ನೀರು ಮತ್ತೆ ಏರಿಕೆಯಾಗುವ ಸಾಧ್ಯತೆಯಿದ್ದು, ತೀರವಾಸಿಗಳು ತೀವ್ರ ಆತಂಕಿತರಾಗಿದ್ದಾರೆ.

ಅಣೆಕಟ್ಟಿನಿಂದ ಗಂಟೆಗೊಮ್ಮೆ ಸೈರನ್ ಭಾರಿಸಿ ನೀರು ಬಿಡಲಾಗುತ್ತಿದೆ. ಶಂಭೂರು ಎಎಂಆರ್‍ನ 26 ಗೇಟುಗಳಲ್ಲಿ ನೇತ್ರಾವತಿ ನದಿ ನೀರು ಹೊರಬಿಡಲಾಗಿದ್ದು, ತುಂಬೆಯಲ್ಲಿ 8.5 ಮೀ.ಎತ್ತರದಲ್ಲಿ ನೀರು ಸಂಗ್ರಹಗೊಂಡು ಹರಿಯುತಿದೆ. ಕಳೆದ ವರ್ಷ ಈ ಸಮಯದಲ್ಲಿ ನೇತ್ರಾವತಿ ನೀರಿನ ಮಟ್ಟ 10.7 ಇತ್ತು. ಇದೇ ಮೊದಲ ಬಾರಿಗೆ ಈ ರೀತಿ ಅಪಾಯ ಮಟ್ಟದಲ್ಲಿ ನೇತ್ರಾವತಿ ಭೋರ್ಗರೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News