ಭಾರತ ‘ಎ’ ತಂಡದ ಮಡಿಲಿಗೆ ಸರಣಿ: ನದೀಮ್‌ಗೆ 5 ವಿಕೆಟ್

Update: 2019-08-10 17:55 GMT

ಟರೌಬ(ಟ್ರಿನಿಡಾಡ್ ಮತ್ತು ಟೊಬಾಗೊ), ಆ.10: ಎಡಗೈ ಸ್ಪಿನ್ನರ್ ಶಾಬಾಝ್ ನದೀಮ್ ಮತ್ತೊಮ್ಮೆ ಐದು ವಿಕೆಟ್ ಗೊಂಚಲು ಕಬಳಿಸಿದ ಹೊರತಾಗಿಯೂ ದಿಟ್ಟ ಪ್ರದರ್ಶನ ನೀಡಿದ ವೆಸ್ ್ಟಇಂಡೀಸ್ ‘ಎ’ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮೂರನೇ ಹಾಗೂ ಅಂತಿಮ ಅನಧಿಕೃತ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾದರು. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಜಯಿಸಿದ್ದ ಭಾರತ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.

ಗೆಲ್ಲಲು 373 ರನ್ ಕಠಿಣ ಗುರಿ ಪಡೆದಿದ್ದ ವೆಸ್ಟ್‌ಇಂಡೀಸ್ ‘ಎ’ ವಿಕೆಟ್ ನಷ್ಟವಿಲ್ಲದೆ 37 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ನಾಲ್ಕನೇ ದಿನದಾಟದಲ್ಲಿ ಗೆಲ್ಲಲು ಇನ್ನೂ 336 ರನ್ ಅಗತ್ಯವಿತ್ತು. ಆದರೆ, ಅಂತಿಮವಾಗಿ 6 ವಿಕೆಟ್‌ಗಳ ನಷ್ಟಕ್ಕೆ 314 ರನ್ ಗಳಿಸಿ ಪಂದ್ಯ ಡ್ರಾಗೊಳಿಸಿತು.

ಆರಂಭಿಕ ಆಟಗಾರ ಜೆರೆಮಿ ಸೊಲೊಝಾನೊ(92 ರನ್, 252 ಎಸೆತ), ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ಬ್ರೆಂಡನ್ ಕಿಂಗ್(77 ರನ್, 84 ಎಸೆತ) ಹಾಗೂ ಅನುಭವಿ ಆಟಗಾರ ಸುನೀಲ್ ಆ್ಯಂಬ್ರಿಸ್(69 ರನ್, 142 ಎಸೆತ)ಆತಿಥೇಯ ತಂಡ ಪಂದ್ಯವನ್ನು ಡ್ರಾಗೊಳಿಸಲು ನೆರವಾದರು.

 ಭಾರತದ ಪರ ನದೀಮ್(5-103)ಮತ್ತೊಮ್ಮೆ ಶ್ರೇಷ್ಠ ಬೌಲಿಂಗ್ ಸಂಘಟಿಸಿದರು. ಜಾರ್ಖಂಡ್‌ನ ಎಡಗೈ ಸ್ಪಿನ್ನರ್ ನದೀಮ್ ಭಾರತದ ದೇಶೀಯ ಕ್ರಿಕೆಟ್ ವಲಯದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಬೌಲರ್ ಪೈಕಿ ಒಬ್ಬರಾಗಿದ್ದಾರೆ. 3 ಪಂದ್ಯಗಳಲ್ಲಿ ಎರಡರಲ್ಲಿ ಆಡಿರುವ ನದೀಮ್ ನಾಲ್ಕು ಇನಿಂಗ್ಸ್ ಗಳಲ್ಲಿ ಮೂರರಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಸರಣಿಯಲ್ಲಿ ಒಟ್ಟು 15 ವಿಕೆಟ್ ಉರುಳಿಸಿದ ಸಾಧನೆ ಮಾಡಿದರು.

ಈ ತಿಂಗಳಾಂತ್ಯದಲ್ಲಿ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಟೆಸ್ಟ್ ಸ್ಪೆಷಲಿಸ್ಟ್ ಗಳಾದ ನಾಯಕ ಹನುಮ ವಿಹಾರಿ(224 ರನ್, 1 ಶತಕ, 1 ಅರ್ಧಶತಕ), ವೃದ್ಧಿಮಾನ್ ಸಹಾ(137 ರನ್, 2 ಅರ್ಧಶತಕ) ಹಾಗೂ ಮಾಯಾಂಕ್ ಅಗರ್ವಾಲ್(123 ರನ್, 1 ಅರ್ಧಶತಕ)ಗಮನಾರ್ಹ ಪ್ರದರ್ಶನ ನೀಡಿದರು.

ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ 3ನೇ ಪಂದ್ಯದಲ್ಲಿ ಒತ್ತಡ ಪರಿಸ್ಥಿತಿಯಲ್ಲಿ ದ್ವಿಶತಕ ಬಾರಿಸಿ ಗಮನ ಸೆಳೆದರು. ಅಂತಿಮ ದಿನದಾಟದಲ್ಲಿ ಮುಂಬೈನ ಶಿವಂ ದುಬೆ(180 ರನ್ ಹಾಗೂ 5 ವಿಕೆಟ್ ಗಳು)ತಮಿಳುನಾಡಿನ ಆಲ್‌ರೌಂಡರ್ ವಿಜಯ್ ಶಂಕರ್‌ಗಿಂತ ಉತ್ತಮ ವೇಗದ ಬೌಲಿಂಗ್‌ನ ಮೂಲಕ ಮಿಂಚಿದರು.

ವಿಂಡೀಸ್‌ನ ಆರಂಭಿಕ ಜೋಡಿ ಮೊಂಟ್‌ಸಿನ್ ಹಾಡ್ಜ್(25,82 ಎಸೆತ) ಹಾಗೂ ಸೊಲೊಝಾನೊ ಮೊದಲ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ನದೀಮ್ ಬೇರ್ಪಡಿಸಿದರು.

ಆರಂಭಿಕ ಆಟಗಾರ ಸೊಲೊಝಾನೊ ಅವರೊಂದಿಗೆ 2ನೇ ವಿಕೆಟ್ ಜೊತೆಯಾಟದಲ್ಲಿ 99 ರನ್ ಸೇರಿಸಿದ ಕಿಂಗ್ 84 ಎಸೆತಗಳ ಇನಿಂಗ್ಸ್ ನಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಸಿಡಿಸಿದರು. ಆ್ಯಂಬ್ರಿಸ್ ಹಾಗೂ ಸೊಲೊಝಾನೊ 3ನೇ ವಿಕೆಟ್ ಜೊತೆಯಾಟದಲ್ಲಿ ಇನ್ನೂ 60 ರನ್ ಸೇರಿಸಿದರು.

 ಈ ಜೊತೆಯಾಟ ಕ್ಲೀನ್‌ಸ್ವೀಪ್ ಸಾಧಿಸುವ ಭಾರತ ‘ಎ’ ತಂಡದ ಕನಸನ್ನು ಭಗ್ನಗೊಳಿಸಿತು. ಇತ್ತೀಚೆಗೆ ವಿಶ್ವಕಪ್ ಪಂದ್ಯದಲ್ಲಿ ವಿಂಡೀಸ್ ಪರ ಆಡಿದ್ದ ಆ್ಯಂಬ್ರಿಸ್ ಅವರು ಬ್ಲಾಕ್‌ವುಡ್ ಹಾಗೂ ಹ್ಯಾಮಿಲ್ಟನ್ ವಿರುದ್ದ ನಿರ್ಣಾಯಕ ಜೊತೆಯಾಟ ನಡೆಸಿದರು. ಆ್ಯಂಬ್ರಿಸ್‌ರನ್ನು ಕ್ಲೀನ್‌ಬೌಲ್ಡ್ ಮಾಡಿದ ನದೀಮ್ ಐದು ವಿಕೆಟ್ ಗೊಂಚಲು ಪೂರೈಸಿದರು.

►ಸಂಕ್ಷಿಪ್ತ ಸ್ಕೋರ್

►ಭಾರತ ‘ಎ’: 201 ಹಾಗೂ 365/4

►ವೆಸ್ಟ್‌ಇಂಡೀಸ್ ‘ಎ’: 194 ಹಾಗೂ 314/6(ಜೆರೆಮಿ ಸೊಲೊಝಾನೊ 92, ಬ್ರೆಂಡನ್ ಕಿಂಗ್ 77, ಸುನೀಲ್ ಆ್ಯಂಬ್ರಿಸ್ 69, ಶಾಬಾಝ್ ನದೀಮ್ 5-103)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News