ಭಾರತ ವಿರುದ್ಧ ಟೆಸ್ಟ್ ಸರಣಿಗೆ ವಿಂಡೀಸ್ ತಂಡ ಪ್ರಕಟ

Update: 2019-08-10 18:13 GMT

ಗಯಾನ, ಆ.10: ಈ ತಿಂಗಳಾಂತ್ಯದಲ್ಲಿ ಭಾರತ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ವೆಸ್ಟ್‌ಇಂಡೀಸ್ ತಂಡ ಪ್ರಕಟವಾಗಿದ್ದು, ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ರಹಕೀಮ್ ಕಾರ್ನ್‌ವಾಲ್‌ಗೆ ಅವಕಾಶ ನೀಡಲಾಗಿದೆ. ಗಾಯದ ಸಮಸ್ಯೆ ಎದುರಿಸುತ್ತಿರುವ ವೇಗದ ಬೌಲರ್ ಅಲ್‌ಝಾರಿ ಜೋಸೆಫ್ ಸರಣಿಯಿಂದ ವಂಚಿತರಾಗಿದ್ದಾರೆ.

ಲೀವಾರ್ಡ್ ಐಲ್ಯಾಂಡ್ಸ್ ಹಾಗೂ ವೆಸ್ಟ್ ಇಂಡೀಸ್ ‘ಎ’ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ 26ರ ಹರೆಯದ ಕಾರ್ನ್ ವಾಲ್ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಪಡೆದಿದ್ದಾರೆ. ‘‘ಕಾರ್ನ್‌ವಾಲ್ ದೀರ್ಘ ಸಮಯದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ತಾನೋರ್ವ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಿದ್ದಾರೆ. ಈ ಸಮಯ ಟೆಸ್ಟ್ ತಂಡಕ್ಕೆ ಅವರ ಆಯ್ಕೆ ಉತ್ತಮವೆನ್ನುವುದು ನಮ್ಮ ನಂಬಿಕೆ’’ ಎಂದು ಹಂಗಾಮಿ ಆಯ್ಕೆ ಸಮಿತಿಯ ಮುಖ್ಯಸ್ಥ ರಾಬರ್ಟ್ ಹೇನ್ಸ್ ಹೇಳಿದ್ದಾರೆ.

 ಈ ವರ್ಷ ನಡೆದ ಐಪಿಎಲ್ ಟೂರ್ನಿಯ ವೇಳೆ ಗಾಯಗೊಂಡಿದ್ದ ಜೋಸೆಫ್‌ಗೆ ಗಾಯದಿಂದ ಚೇತರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಕಾರ್ನ್‌ವಾಲ್‌ರೊಂದಿಗೆ ವೆಸ್ಟ್‌ಇಂಡೀಸ್ ‘ಎ’ ತಂಡದ ನಾಯಕ ಶಮರ್ ಬ್ರೂಕ್ಸ್ 13 ಸದಸ್ಯರ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದ ಇನ್ನೋರ್ವ ಹೊಸ ಮುಖವಾಗಿದ್ದಾರೆ.

 ಕಾರ್ನ್‌ವಾಲ್‌ರ ಹುಟ್ಟೂರು ಆ್ಯಂಟಿಗುವಾ ಆಗಸ್ಟ್ 22ರಂದು ಮೊದಲ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿದೆ. ಎರಡನೇ ಟೆಸ್ಟ್ ಆ.30ರಂದು ಜಮೈಕಾದ ಸಬಿನ ಪಾರ್ಕ್‌ನಲ್ಲಿ ನಡೆಯಲಿದೆ.

 ವೆಸ್ಟ್‌ಇಂಡೀಸ್ ಟೆಸ್ಟ್ ತಂಡ

► ಜೇಸನ್ ಹೋಲ್ಡರ್(ನಾಯಕ), ಕ್ರೆಗ್ ಬ್ರಾತ್‌ವೇಟ್, ಡರೆನ್ ಬ್ರಾವೊ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರೋಸ್ಟನ್ ಚೇಸ್, ರಹಕೀಮ್ ಕಾರ್ನ್‌ವಾಲ್, ಶೇನ್ ಡೌರಿಚ್, ಶನೊನ್ ಗ್ಯಾಬ್ರಿಯಲ್, ಶಿಮ್ರಿನ್ ಹೆಟ್ಮೆಯರ್, ಶೈ ಹೋಪ್, ಕೀಮೊ ಪಾಲ್, ಕೆಮರ್ ರೋಚ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News