ಕಾಶ್ಮೀರದಲ್ಲಿ ಮತ್ತೆ ನಿರ್ಬಂಧ ಹೇರಿಕೆ: ಮನೆಗೆ ತೆರಳುವಂತೆ ಜನತೆಗೆ ಸೂಚನೆ

Update: 2019-08-11 14:14 GMT

ಶ್ರೀನಗರ, ಆ.11: ಶ್ರೀನಗರದಲ್ಲಿ ಶನಿವಾರ ನಿರ್ಭಂಧ ಸಡಿಲಿಸಿದ ಸಂದರ್ಭ ಅಲ್ಲಲ್ಲಿ ಘರ್ಷಣೆಯ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಜನರು ಗುಂಪುಗೂಡುವುದಕ್ಕೆ ಇದ್ದ ನಿರ್ಬಂಧವನ್ನು ರವಿವಾರ ಮತ್ತೆ ಹೇರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆಗೆ ತೆರಳುವಂತೆ ಜನರಿಗೆ ಪೊಲೀಸ್ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಸೂಚಿಸಲಾಗಿದೆ. ಅಲ್ಲದೆ ಅಂಗಡಿಗಳನ್ನು ಮುಚ್ಚುವಂತೆ ತಿಳಿಸಲಾಗಿದೆ. ಈ ಮಧ್ಯೆ, ಶನಿವಾರ ನಿರ್ಬಂಧ ಸಡಿಲಿಸಿದ ಸಂದರ್ಭ ರಾಜ್ಯದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆಯನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ದಿಲ್‌ಬಾಗ್ ಸಿಂಗ್ ತಳ್ಳಿಹಾಕಿದ್ದಾರೆ.

ಕೆಲವೆಡೆ ಸಣ್ಣಪುಟ್ಟ ಘರ್ಷಣೆ, ಕಲ್ಲೆಸೆತದ ಘಟನೆ ನಡೆದಿದೆ. ತಕ್ಷಣ ಕಿಡಿಗೇಡಿಗಳನ್ನು ಚದುರಿಸಲಾಗಿದೆ ಎಂದವರು ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಸುಮಾರು 10000 ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಧ್ಯಮದ ವರದಿಯನ್ನು ಗೃಹ ಸಚಿವಾಲಯ ತಳ್ಳಿ ಹಾಕಿದ್ದು, ಇದು ಉತ್ಪ್ರೇಕ್ಷಿತ ಮತ್ತು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಅತ್ಯಂತ ಶಾಂತವಾಗಿದ್ದು ರಾಜ್ಯದ ಯಾವುದೇ ಪ್ರದೇಶದಲ್ಲಿ ಹಿಂಸಾಚಾರ ನಡೆದ ವರದಿಯಾಗಿಲ್ಲ ಎಂದು ರಾಜ್ಯ ಪೊಲೀಸರು ಟ್ವೀಟ್ ಮಾಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಕೆಲವೆಡೆ ಗುಂಡಿನ ಚಕಮಕಿ ನಡೆದಿದೆ ಎಂಬ ವದಂತಿಗೆ ಕಿವಿಗೊಡಬಾರದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಹ್ಮಣ್ಯಂ ಜನತೆಗೆ ಮನವಿ ಮಾಡಿದ್ದಾರೆ.

ಕಾಶ್ಮೀರ ಕಣಿವೆ ಶಾಂತವಾಗಿದೆ. ಕಳೆದೊಂದು ವಾರದಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಶನಿವಾರ ಶ್ರೀನಗರ ಹಾಗೂ ಇತರ ಪಟ್ಟಣಗಳಲ್ಲಿ ಜನರು ಈದ್ ಹಬ್ಬದ ಖರೀದಿಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು ಎಂದು ಸರಕಾರದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News