ಕೇಂದ್ರೀಯ ವಿದ್ಯಾಲಯ: ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ 24 ಪಟ್ಟು ಹೆಚ್ಚಳ !

Update: 2019-08-11 15:36 GMT

ಹೊಸದಿಲ್ಲಿ,ಆ.12: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ 10ನೇ ಹಾಗೂ 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳ 50 ರೂ.ನಿಂದ 1,200 ರೂ.ಗೆ ಏರಿಕೆ ಮಾಡಿದೆ. ಸಾಮಾನ್ಯಶ್ರೇಣಿಯ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಕೂಡಾ ಎರಡು ಪಟ್ಟು ಏರಿಕೆ ಮಾಡಲಾಗಿದ್ದು, ಇನ್ನು ಮುಂದೆ ಅವರು 1,500 ರೂ.ಗಳನ್ನು ಪಾವತಿಸಬೇಕಾಗುತ್ತದೆ.

   ಹತ್ತನೆಯ ತರಗತಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ ಹಾಗೂ 11ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಗೆ ಹಾಜರಾಗಲು ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕಳೆದ ವಾರ ಸಿಬಿಎಸ್‌ಇ ಮಂಡಳಿಯು ಪರೀಕ್ಷಾ ಶುಲ್ಕದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಅಧಿಸೂಚನೆಯನ್ನು ಪ್ರಕಟಿಸಿತ್ತು. ಈಗಾಗಲೇ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿರುವ ಹಾಗೂ ಹಳೆಯ ನಮೂನೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ವಿಧಿಸಿರುವ ಶಾಲೆಗಳು, ಇದೀಗ ಬಾಕಿ ಮೊತ್ತವನ್ನು ಸಂಗ್ರಹಿಸಬೇಕೆಂದು ಅದು ಸೂಚನೆ ನೀಡಿದೆ.

  ಪರಿಷ್ಕೃತ ಶುಲ್ಕ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಐದು ಪಠ್ಯವಿಷಯಗಳ ಪರೀಕ್ಷೆಗಳಿಗೆ ಹಾಜರಾಗಬೇಕಾದರೆ 1200 ರೂ. ಪಾವತಿಸಬೇಕಾಗಿದೆ. ಇದಕ್ಕೂ ಮುನ್ನ ಅವರು ಈ ಐದು ಪಠ್ಯವಿಷಯಗಳಿಗೆ ಕೇವಲ 50 ರೂ.ಪಾವತಿಸುತ್ತಿದ್ದರು. 12ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚುವರಿ ಪಠ್ಯ ವಿಷಯಕ್ಕೆ ಹಾಜರಾಗುವ ಎಸ್‌ಸಿ./ಎಸ್‌ಟಿ ವಿದ್ಯಾರ್ಥಿಗಳು ಈ ಹಿಂದೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿರಲಿಲ್ಲ. ಆದರೆ ಈಗ ಅವರು 300 ರೂ. ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯ ಶ್ರೇಣಿಯ ವಿದ್ಯಾರ್ಥಿಗಳು ಕೂಡಾ ಹೆಚ್ಚುವರಿ ಪಠ್ಯ ವಿಷಯಕ್ಕೆ ಈ ಮೊದಲು 300 ರೂ.ಗಳನ್ನು ಪಾವತಿಸಬೇಕಾಗುತ್ತದೆ.

  ಶೇ.100ರಷ್ಟು ದೃಷ್ಟಿ ಮಾಂದ್ಯವಿರುವ ವಿದ್ಯಾರ್ಥಿಗಳಿಗೆ ಸಿಬಿಎಸ್‌ಐ ಪರೀಕ್ಷಾ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಸಿಬಿಎಸ್‌ಇ ಪರೀಕ್ಷಾ ಶುಲ್ಕದ ವ್ಯತ್ಯಾಸವನ್ನು ಠೇವಣಿಯಿಡಲು ವಿಫಲರಾದ ವಿದ್ಯಾರ್ಥಿಯ ಹೆಸರನ್ನು ನೋಂದಾಯಿಸಲಾಗುವುದಿಲ್ಲ ಹಾಗೂ ಅವರಿಗೆ 2019-20ನೇ ಸಾಲಿನ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ವಿದೇಶಗಳಲ್ಲಿ ನ ಸಿಬಿಎಸ್‌ಐ ಸಾಲೆಗಳಲ್ಲಿ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು 10 ಹಾಗೂ 12ನೇ ತರಗತಿಯಲ್ಲಿ ಐದು ವಿಷಯಗಳಿಗೆ 10 ಸಾವಿರ ರೂ. ಪಾವತಿಸಬೇಕಾಗುತ್ತದೆ. ಈ ಹಿಂದೆ ಈ ಶುಲ್ಕವು 5 ಸಾವಿರ ರೂ.ಗಳಾಗಿದ್ದವು. ಅಂತೆಯೇ 12ನೇ ತರಗತಿಯಲ್ಲಿ ಹೆಚ್ಚುವರಿ ಪಠ್ಯವಿಷಯದ ಪರೀಕ್ಷಾ ಶುಲ್ಕ ಈ ಹಿಂದೆ 500 ರೂ.ಗಳಾಗಿದ್ದರೆ, ಈಗ ಅದನ್ನು 2 ಸಾವಿರ ರೂ.ಗೆ ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News