ಹಜ್‌ನ 3ನೇ ದಿನ: ಮಿನಾದಲ್ಲಿ ಸೈತಾನನಿಗೆ ಕಲ್ಲೆಸೆದ ಯಾತ್ರಿಕರು

Update: 2019-08-11 16:17 GMT

ಮಿನಾ (ಸೌದಿ ಅರೇಬಿಯ), ಆ. 11: ಈ ದುಲ್-ಅಝ್ ಹಾದ ಮೊದಲ ದಿನ ಹಾಗೂ ಹಜ್‌ನ ಮೂರನೇ ದಿನದ ಮುಂಜಾನೆ ಸುಮಾರು 25 ಲಕ್ಷ ಹಜ್ ಯಾತ್ರಿಕರು ಮಿನಾದಲ್ಲಿರುವ ಜಮಾರತ್ ಅಲ್-ಅಕಾಬಕ್ಕೆ ಜೊತೆಯಾಗಿ ನಡೆದರು.

ಸೈತಾನನಿಗೆ ಕಲ್ಲೆಸೆಯುವ ಸಂಕೇತವಾಗಿ, ಇಲ್ಲಿನ ಗೋಡೆಯೊಂದಕ್ಕೆ ಯಾತ್ರಿಕರು 7 ಕಲ್ಲುಗಳನ್ನು ಎಸೆದರು.

ಅಗಾಧ ಸಂಖ್ಯೆಯಲ್ಲಿದ್ದ ಭದ್ರತಾ ಸಿಬ್ಬಂದಿ, 25 ಲಕ್ಷ ಜನರ ಪ್ರವಾಹವನ್ನು ನಿಯಂತ್ರಿಸುತ್ತಿದ್ದರು ಹಾಗೂ ಎಲ್ಲಿಯೂ ಜನ ದಟ್ಟಣೆ ಆಗದಂತೆ ನೋಡಿಕೊಳ್ಳುತ್ತಿದ್ದರು.

2015ರಲ್ಲಿ ಮಿನಾದಲ್ಲಿ ನಡೆದ ಕಾಲ್ತುಳಿತದಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು. ಅದು ಕಳೆದ 25 ವರ್ಷಗಳ ಅವಧಿಯಲ್ಲಿ ನಡೆದ ಅತಿ ಘೋರ ದುರಂತವಾಗಿತ್ತು.

ಅಂದಿನಿಂದ, ಜಮಾರತ್ ಅಲ್ ಅಕಾಬ ಮತ್ತು ಕಲ್ಲೆಸೆಯುವ ವಿಧಿ ನಡೆಯುವ ಜಮಾರತ್ ಸೇತುವೆಯಲ್ಲಿ ಜನರ ಪ್ರವಾಹವನ್ನು ನಿಯಂತ್ರಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸೌದಿ ಅರೇಬಿಯ ಭದ್ರತಾ ಪಡೆಗಳು ಮತ್ತು ನಾಗರಿಕ ರಕ್ಷಣಾ ಸ್ವಯಂಸೇವಕರು ಎಲ್ಲ ಸ್ಥಳಗಳಲ್ಲಿ ಯಾತ್ರಿಕರ ಸುರಕ್ಷತೆಯನ್ನು ಖಾತರಿಪಡಿಸಲು ಶ್ರಮಿಸುತ್ತಿದ್ದಾರೆ. ಅವರು ಯಾತ್ರಿಕರಿಗೆ ನೀರು ಕೊಡುತ್ತಾರೆ, ನಡೆಯಲು ಕಷ್ಟ ಪಡುವ ಹಾಗೂ ಬಿಸಿಲಿನಿಂದ ಬಳಲಿದ ಯಾತ್ರಿಕರಿಗೆ ತುರ್ತು ನೆರವು ನೀಡುತ್ತಾರೆ ಹಾಗೂ ಕಿಕ್ಕಿರಿದ ಸ್ಥಳಗಳಲ್ಲಿ ಯಾತ್ರಿಕರಿಗೆ ಮಾರ್ಗದರ್ಶನ ಮಾಡುತ್ತಾರೆ.

ಶನಿವಾರ ರಾತ್ರಿ ಲಕ್ಷಾಂತರ ಯಾತ್ರಿಕರು ಮಿನಾ ಕಣಿವೆಯಲ್ಲಿರುವ ಡೇರೆಗಳ ಬೃಹತ್ ನಗರದಲ್ಲಿ ನೆಲೆಸಿದರು. ಸೂರ್ಯೋದಯವಾಗುತ್ತಿದ್ದಂತೆಯೇ ಸಾಲಿನಲ್ಲಿ ಮಿನಾದತ್ತ ಹೆಜ್ಜೆ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News