ಅಲ್-ಅಕ್ಸಾ ಮಸೀದಿ ಹೊರಗೆ ಫೆಲೆಸ್ತೀನಿಯರು-ಇಸ್ರೇಲ್ ಪೊಲೀಸರ ನಡುವೆ ಸಂಘರ್ಷ
ಜೆರುಸಲೇಮ್, ಆ. 11: ಜೆರುಸಲೇಮ್‌ನ ಅಲ್-ಅಕ್ಸ್ ಮಸೀದಿಯ ಹೊರಗಡೆ ನಡೆದ ಸಂಘರ್ಷದ ವೇಳೆ ಫೆಲೆಸ್ತೀನಿಯರನ್ನು ಚದುರಿಸಲು ಇಸ್ರೇಲಿ ಪೊಲೀಸರು ರವಿವಾರ ಸೌಂಡ್ ಗ್ರೆನೇಡ್‌ಗಳನ್ನು ಸಿಡಿಸಿದ್ದಾರೆ.
ಈದುಲ್ ಅಝ್ ಹಾ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಈ ಮಸೀದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು.
ಗಾಯಗೊಂಡ ಕನಿಷ್ಠ 14 ಫೆಲೆಸ್ತೀನಿಯರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಫೆಲೆಸ್ತೀನ್ ಆ್ಯಂಬುಲೆನ್ಸ್ ಸೇವೆಯೊಂದು ಹೇಳಿದೆ. ನಾಲ್ವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ಕಾನ್ ಪಬ್ಲಿಕ್ ರೇಡಿಯೊ ಹೇಳಿದೆ.
ಫೆಲೆಸ್ತೀನಿಯರು ಮತ್ತು ಇಸ್ರೇಲಿ ಪೊಲೀಸರ ನಡುವೆ ಘರ್ಷಣೆ ಏರ್ಪಡುತ್ತಿದ್ದಂತೆಯೇ, ಪೊಲೀಸರು ಸೌಂಡ್ ಗ್ರೆನೇಡ್‌ಗಳನ್ನು ಸಿಡಿಸಿದರು. ಅದರ ಹೊಗೆಯು ಮಸೀದಿಯ ಇಡೀ ಆವರಣವನ್ನು ಆವರಿಸಿತು.
ಇಸ್ಲಾಮ್‌ನ ಮೂರನೇ ಅತಿ ಪವಿತ್ರ ಸ್ಥಳವಾಗಿರುವ ಅಲ್-ಅಕ್ಸಾ ಮಸೀದಿ ಮತ್ತು ಯಹೂದಿಯರ ಪವಿತ್ರ ಸ್ಥಳ ಟೆಂಪಲ್ ಮೌಂಟ್ ಒಂದೇ ಆವರಣದಲ್ಲಿದೆ. ಹಾಗಾಗಿ, ಇಸ್ರೇಲ್-ಫೆಲೆಸ್ತೀನ್ ಸಂಘರ್ಷದಲ್ಲಿ ಇದೊಂದು ಸೂಕ್ಷ್ಮ ಪ್ರದೇಶವಾಗಿದೆ.