ವಿದೇಶ ಸಚಿವ ಜೈಶಂಕರ್ ಚೀನಾಕ್ಕೆ ಆಗಮನ

Update: 2019-08-11 16:46 GMT

ಬೀಜಿಂಗ್, ಆ. 11: ಚೀನಾದ ವಿದೇಶ ಸಚಿವ ವಾಂಗ್ ಯಿ ಜೊತೆ ಮಹತ್ವದ ಮಾತುಕತೆ ನಡೆಸುವುದಕ್ಕಾಗಿ ಭಾರತದ ವಿದೇಶ ಸಚಿವ ಎಸ್. ಜೈಶಂಕರ್ ರವಿವಾರ ಚೀನಾ ರಾಜಧಾನಿ ಬೀಜಿಂಗ್‌ಗೆ ಆಗಮಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಭಾರತದ ಕ್ರಮಕ್ಕೆ ಚೀನಾ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಭಾರತೀಯ ವಿದೇಶ ಸಚಿವರು ಚೀನಾ ಪ್ರವಾಸ ಕೈಗೊಂಡಿದ್ದಾರೆ.

ಲಡಾಖನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸುವ ಭಾರತದ ಕ್ರಮ ‘ಅಸ್ವೀಕಾರಾರ್ಹ’ ಎಂದು ಚೀನಾ ಹೇಳಿದೆ.

ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದಕ್ಕೆ ಪಡೆಯುವ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸುವ ಮೊದಲೇ ಜೈಶಂಕರ್‌ರ ಎರಡು ದಿನಗಳ ಚೀನಾ ಭೇಟಿ ನಿಗದಿಯಾಗಿತ್ತು.

ಸೋಮವಾರ ನಡೆಯುವ ಮಾತುಕತೆಯ ವೇಳೆ ಭಾರತದ ಕ್ರಮಗಳ ಬಗ್ಗೆ ಚೀನಾವು ಕಳವಳ ವ್ಯಕ್ತಪಡಿಸುವ ನಿರೀಕ್ಷೆಯಿದೆ. ಅದರಲ್ಲೂ ಮುಖ್ಯವಾಗಿ, ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಈಗಾಗಲೇ ಚೀನಾದ ವಿದೇಶ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ, ಚೀನಾದಿಂದ ಪ್ರಬಲ ಆಕ್ಷೇಪ ವ್ಯಕ್ತಗೊಳ್ಳುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News