ಹೊಂಡ-ಗುಂಡಿಗಳ ನಡುವೆ ಹುಡುಕಬೇಕು ಬಂದರ್ ನ ಈ ರಸ್ತೆ: ಇಲ್ಲಿ ಅಪಘಾತಗಳು ಸರ್ವೇ ಸಾಮಾನ್ಯ !

Update: 2019-08-11 18:14 GMT

ಮಂಗಳೂರು, ಆ.11: ಕರಾವಳಿಯ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಮಂಗಳೂರಿನ ಬಂದರ್ ಕೋಟಿಗಟ್ಟಲೆ ವ್ಯವಹಾರದ ಮೂಲವಾಗಿದ್ದರೂ ಇಲ್ಲಿನ ಮುಖ್ಯರಸ್ತೆಯು ಡಾಂಬರ್, ಜಲ್ಲಿಕಲ್ಲು, ಮಣ್ಣು ಕಿತ್ತು ಹೋಗಿ ರಸ್ತೆ ಪಕ್ಕಕ್ಕೆ ಸರಿದಿವೆ. ನಗರವು ಸ್ಮಾರ್ಟ್‌ಸಿಟಿಯಾಗುತ್ತಿದ್ದರೂ ರಸ್ತೆ ಮಾತ್ರ ಹೊಂಡ-ಗುಂಡಿಗಳಿಂದಲೇ ರಾಚುತ್ತಿದ್ದು, ವಾಹನ ಸವಾರರ ಜೀವಕ್ಕೆ ಕಂಟಕವಾಗಿದೆ.

ನಗರದ ಸ್ಟೇಟ್‌ಬ್ಯಾಂಕ್‌ನಿಂದ ಬಂದರ್‌ನ್ನು ಪ್ರವೇಶಿಸುವ ಮುಖ್ಯರಸ್ತೆ (ನೆಲ್ಲಿಕಾಯಿ ರಸ್ತೆ)ಯು ಹೊಂಡ-ಗುಂಡಿಗಳಿಂದ ತುಂಬಿಹೋಗಿದ್ದು, ರಸ್ತೆ ಎಲ್ಲಿದೆ ಎನ್ನುವುದನ್ನು ಹುಡುಕುವ ಪರಿಸ್ಥಿತಿ ಇಲ್ಲಿ ಸಾಮಾನ್ಯವಾಗಿದೆ. ರಸ್ತೆಯಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯು ಇತ್ತ ದಿವ್ಯಮೌನ ವಹಿಸಿದೆ.

ಬಂದರ್‌ನ ರಸ್ತೆಯ ಸಮಸ್ಯೆಯನ್ನು ನೋಡಲಾಗುತ್ತಿಲ್ಲ. ಸೋಮವಾರವೇ ಬಕ್ರೀದ್ ಇದ್ದರೂ ರಸ್ತೆಯನ್ನು ಜಲ್ಲಿ ಕಲ್ಲು, ಮಣ್ಣು ಹಾಕಿ ಹೊಂಡ-ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಪಾಲಿಕೆ, ಕಾರ್ಪೊರೇಟರ್‌ಗಳಂತೂ ಇತ್ತ ಕಣ್ಣು ಹಾಯಿಸುತ್ತಿಲ್ಲ. ಹಾಗಾಗಿ ನಾವೇ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ರವಿವಾರ ರಾತ್ರಿಯೇ ಆರಂಭಿಸಿದ್ದೇವೆ ಎಂದು ಅಲ್‌ಹಕ್ ಫೌಂಡೇಶನ್‌ನ ಅಧ್ಯಕ್ಷ ಬಿ.ಎಸ್.ಇಮ್ತಿಯಾಝ್ ‘ವಾರ್ತಾಭಾರತಿ’ಗೆ ತಿಳಿಸಿದರು.

ರಸ್ತೆಯಲ್ಲಿ ಪ್ರತಿದಿನ 40ರಿಂದ 50 ಸಾವಿರ ಜನರು ಓಡಾಡುತ್ತಾರೆ. ಬಂದರ್ ಮಂಗಳೂರಿನ ವ್ಯಾಪಾರ ಕೇಂದ್ರವಾಗಿದೆ. ಜನನಿಬಿಡ ಪ್ರದೇಶವಾದರೂ ರಸ್ತೆ ಮಾತ್ರ ಓಬಿರಾಯನ ಕಾಲದಂತಿದೆ. ಶಾಸಕ ವೇದವ್ಯಾಸ ಕಾಮತ್ ಹಲವು ಅಭಿವೃದ್ಧಿ ಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರಂತೆ, ಬಂದರ್ ರಸ್ತೆಯನ್ನೂ ಅಭಿವೃದ್ಧಿ ಪಡಿಸಿದರೆ ಸ್ಥಳೀಯರು, ವಾಹನ ಸವಾರರು ನಿಶ್ಚಿಂತೆಯಿಂದ ಇಲ್ಲಿ ಸಂಚರಿಸಬಹುದಾಗಿದೆ ಎಂದು ಇಮ್ತಿಯಾಝ್ ತಿಳಿಸಿದರು.

ಬಂದರ್ ರಸ್ತೆಯಲ್ಲಿನ ಹೊಟೇಲ್‌ವೊಂದರ ಆವರಣದಲ್ಲಿ ಬೀಳುವ ನೀರನ್ನು ಅಕ್ರಮವಾಗಿ ರಸ್ತೆಯ ಮೇಲೆಯೇ ಬಿಡುತ್ತಾರೆ. ಇದರಿಂದ ರಸ್ತೆ ಹಾಳಾಗಲು ಕಾರಣವಾಗಿದೆ. ಕಳೆದ ಒಂದು ತಿಂಗಳಿಂದ ರಸ್ತೆ ಸಂಪೂರ್ಣ ಜಖಂಗೊಂಡಿದ್ದು, ಹಲವು ಅಪಘಾತಗಳು ಸಂಭವಿಸಿವೆ. ಕಾರುಗಳು, ಬೈಕ್ ಸವಾರರು ದಿನವೊಂದರಲ್ಲಿ ಹಲವು ಅಪಘಾತಗಳು ನಡೆಯುತ್ತಿವೆ. ಈ ಎಲ್ಲ ಅಪಘಾತಗಳಿಗೆ ರಸ್ತೆಯ ಅವಾಂತರವೇ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂದರ್ ರಸ್ತೆಯಲ್ಲಿ ದಿನವೊಂದಕ್ಕೆ ಸಾವಿರಾರು ವಾಹನಗಳು ಓಡಾಡುತ್ತವೆ. ಎರಡು ದಿನಗಳ ಹಿಂದೆ ಮಹಿಳೆಯೊಬ್ಬರು ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಹೊಂಡ-ಗುಂಡಿಗೆ ಬಿದ್ದು ಗಾಯಗೊಂಡಿದ್ದರು. ಈ ಬಗ್ಗೆ ಬಂದರ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ. ಇಂತಹ ಪರಿಸ್ಥಿತಿಗೆ ಮನಪಾ ಕಾರಣ. ಈ ಬಗ್ಗೆ 44ನೇ ವಾರ್ಡ್ ಕಾರ್ಪೊರೇಟರ್‌ಗೆ ಹಲವು ಬಾರಿ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ. ಕಳಪೆ ರಸ್ತೆಯಿಂದಲೇ ಹೆಚ್ಚು ಸಮಸ್ಯೆಗಳು ಬಿಗಡಾಯಿಸುತ್ತಿವೆ ಎನ್ನುವುದು ಸಾರ್ವಜನಿಕರ ಅಳಲು.

Full View

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News