ಮಳೆ ಆರ್ಭಟ ಇಳಿದರೂ, ಏರುತ್ತಲೇ ಇದೆ ಸಾವಿನ ಸಂಖ್ಯೆ

Update: 2019-08-12 06:22 GMT

ಹೊಸದಿಲ್ಲಿ, ಆ. ೧೨: ಹಲವು ರಾಜ್ಯಗಳಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಪ್ರವಾಹ ಇಳಿಮುಖವಾಗಿದೆ. ಆದರೂ ಸಾವಿನ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಮಳೆಸಂಬಂಧಿ ಅನಾಹುತಗಳಿಂದ ಭಾನುವಾರ ವಿವಿಧೆಡೆ 33 ಸಾವುಗಳು ವರದಿಯಾಗಿದ್ದು, ಐದು ದಿನಗಳಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 174ಕ್ಕೇರಿದೆ. ಭಾನುವಾರ ಕೇರಳದಲ್ಲಿ 15, ಗುಜರಾತ್‌ನಲ್ಲಿ 11 ಹಾಗೂ ಕರ್ನಾಟಕದಲ್ಲಿ ಏಳು ಸಾವು ಸಂಭವಿಸಿದೆ.

ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ 11 ಮಂದಿ ಜೀವ ಕಳೆದುಕೊಂಡಿದ್ದು, ಎರಡು ದಿನಗಳಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 33 ಆಗಿದೆ. ಶನಿವಾರ ಫಲ್ಕೂ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡ ಹೋದ ಆರು ಕಾರ್ಮಿಕರು ಹಾಗೂ ಭಾನುವಾರ ಅರಬ್ಬಿ ಸಮುದ್ರದಲ್ಲಿ ಪೋರಬಂದರ್ ಸಮೀಪ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟ ಐವರು ಮೀನುಗಾರರ ಶವಗಳು ಪತ್ತೆಯಾಗಿವೆ. ಇವರೊಂದಿಗೆ ಸಮುದ್ರಕ್ಕೆ ತೆರಳಿದ್ದ 20 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.

ಕೇರಳದಲ್ಲಿ ಮತ್ತೆ 15 ಶವಗಳನ್ನು ಭಾನುವಾರ ಹೊರತೆಗೆಯಲಾಗಿದ್ದು, ಒಟ್ಟು ಸಾವಿನ ಸಂಖ್ಯೆ 72ಕ್ಕೇರಿದೆ. ಮಳೆಯ ತೀವ್ರತೆ ಕಡಿಮೆಯಾಗಿದ್ದು, ಪರಿಹಾರ ಕಾರ್ಯ ಬಿರುಸಿನಿಂದ ಸಾಗಿದೆ. ಆದರೆ ವಯನಾಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಇನ್ನೂ ನಾಪತ್ತೆಯಾಗಿರುವ 63 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪರಿಹಾರ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. 2.47 ಲಕ್ಷ ಮಂದಿಯನ್ನು ಸ್ಥಳಾಂತರಿಸಿದ್ದು, 1639 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ.

ವಯನಾಡ್ ಸಂಸದ ರಾಹುಲ್‌ಗಾಂಧಿ ಕವಲಪ್ಪಾರ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಸಂತ್ರಸ್ತರ ಜತೆ ಚರ್ಚಿಸಿದರು. ಸೋಮವಾರ ಕೋಳಿಕ್ಕೋಡ್ ಮತ್ತು ವಯನಾಡ್‌ಗೆ ಭೇಟಿ ನೀಡಿ ಪರಿಹಾರ ಕಾರ್ಯ ವೀಕ್ಷಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News