‘ಇದು ನಾನು ಈದ್ ಆಚರಿಸುವ ರೀತಿ’

Update: 2019-08-12 10:03 GMT

ಕೊಚ್ಚಿ,ಆ.12: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಪ್ರವಾಹದಿಂದ ತತ್ತರಿಸುತ್ತಿರುವ ಕೇರಳದಲ್ಲಿ ಸ್ಥಳೀಯ ಬಟ್ಟೆ ವ್ಯಾಪಾರಿಯೋರ್ವರ ಮಾನವೀಯತೆ ಸಾಮಾಜಿಕ ಮಾಧ್ಯಮಗಳಲ್ಲಿ ಹೃದಯಗಳಿಗೆ ಲಗ್ಗೆ ಹಾಕುತ್ತಿದೆ. ಎರ್ನಾಕುಳಂ ಜಿಲ್ಲೆಯ ಮಟ್ಟಂಚೇರಿಯಲ್ಲಿ ಸಿದ್ಧ ಉಡುಪುಗಳ ವ್ಯಾಪಾರಿಯಾಗಿರುವ ನೌಷಾದ್ ಬಕ್ರೀದ್ ಹಬ್ಬದ ಮಾರಾಟಕ್ಕೆಂದು ತರಿಸಿದ್ದ ಅಷ್ಟೂ ಸಿದ್ಧ ಉಡುಪುಗಳನ್ನು ನೆರೆ ಪೀಡಿತರಿಗೆ ದೇಣಿಗೆಯಾಗಿ ನೀಡುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದಾರೆ.

ರವಿವಾರ ಸಂಜೆ ನಟ ರಾಜೇಶ ಶರ್ಮಾ ನೇತೃತ್ವದ ಸ್ವಯಂಸೇವಕರ ತಂಡವೊಂದು ಭೀಕರ ನೆರೆ ಮತ್ತು ಭೂಕುಸಿತಗಳಿಂದಾಗಿ ಭಾರೀ ಹಾನಿಯುಂಟಾಗಿರುವ ಮಲಬಾರ್ ಪ್ರದೇಶದಲ್ಲಿಯ ಸಂತ್ರಸ್ತರಿಗೆ ಕಳುಹಿಸಲು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿತ್ತು. ತಂಡವನ್ನು ತನ್ನ ಅಂಗಡಿಗೆ ಆಹ್ವಾನಿಸಿದ ನೌಷಾದ್ ತನ್ನಲ್ಲಿದ್ದ ಎಲ್ಲ ಹೊಸಬಟ್ಟೆಗಳನ್ನು ನೀಡಿದ್ದಾರೆ. ಇವುಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸಿದ್ಧ ಉಡುಪುಗಳು ಹೆಚ್ಚಿನ ಪ್ರಮಾಣದಲ್ಲಿದ್ದು,ನೌಷಾದ್ ಈದ್ ಸಂದರ್ಭದಲ್ಲಿ ಮಾರಾಟ ಮಾಡಲೆಂದು ಇವುಗಳನ್ನು ವಿಶೇಷವಾಗಿ ತರಿಸಿದ್ದರು.

ರಾಜೇಶ್ ಶರ್ಮಾ ಈ ಘಟನೆಯನ್ನು ವಿವರಿಸಿ ವೀಡಿಯೊವೊಂದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಆಗಿನಿಂದಲೂ ಅದು ವೈರಲ್ ಆಗಿದೆ.

‘ ಈ ಜಗತ್ತಿನಿಂದ ನಿರ್ಗಮಿಸುವಾಗ ನಾವು ಯಾವುದನ್ನೂ ನಮ್ಮಿಂದಿಗೆ ಒಯ್ಯುವುದಿಲ್ಲ. ಅಗತ್ಯವುಳ್ಳವರಿಗೆ ನೆರವಾಗುವುದರಲ್ಲಿಯೇ ನನ್ನ ಲಾಭವಿದೆ. ನಾಳೆ ಬಕ್ರೀದ್ ಮತ್ತು ನಾನದನ್ನು ಹೀಗೆ ಆಚರಿಸುತ್ತಿದ್ದೇನೆ ’ ಎಂದು ವೀಡಿಯೊದಲ್ಲಿ ನೌಷಾದ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೊ ವ್ಯಾಪಕವಾಗಿ ಶೇರ್ ಆಗಿದೆ.

ನೌಷಾದ್ ಭರ್ತಿ ಐದು ಚೀಲಗಳಷ್ಟು ಸಿದ್ಧ ಉಡುಪುಗಳನ್ನು ನೆರೆಪೀಡಿತರಿಗಾಗಿ ನೀಡಿದ್ದಾರೆ.

ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ನೌಷಾದ್‌ರನ್ನು ಪ್ರಶಂಸಿಸಿರುವ ಕೇರಳ ಪಿಡಬ್ಲುಡಿ ಸಚಿವ ಜಿ.ಸುಧಾಕರನ್ ಅವರು,ನೌಷಾದ್ ಸಮಾಜಕ್ಕೆ ಅತ್ಯಂತ ಧನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ ಎಂದಿದ್ದಾರೆ.

ನೌಷಾದ್‌ರ ನಿಸ್ವಾರ್ಥ ಸೇವೆಯನ್ನು ಮಲಯಾಳಂ ನಟ ಆಸಿಫ್ ಅಲಿ ಅವರೂ ಪ್ರಶಂಸಿಸಿದ್ದಾರೆ. ‘ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನೆರವಾಗಲು ಸಿದ್ಧರಿರುವ ನೌಷಾದ್‌ರಂತಹ ಸಾವಿರಾರು ಜನರು ನಮ್ಮಾಂದಿಗೆ ಇರುವವರೆಗೂ ಯಾರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ’ ಎಂದು ಅವರು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದಿದ್ದಾರೆ. ಎರ್ನಾಕುಳಂ ಜಿಲ್ಲಾಧಿಕಾರಿ ಎಸ್.ಸುಹಾಸ್ ಅವರೂ ನೌಷಾದ್‌ರನ್ನು ಶ್ಲಾಘಿಸಿದ್ದಾರೆ. ನೌಷಾದ್ ಜೊತೆ ದೂರವಾಣಿಯಲ್ಲಿ ಮಾತನಾಡಿ ಅಭಿನಂದಿಸಿದ ಅವರು,ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮುಗಿದ ಬಳಿಕ ಖುದ್ದಾಗಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News