ಪಂಜಾಬ್ ಸಿಎಂ ಅಮರಿಂದರ್ ಜೊತೆ ಈದ್ ಆಚರಿಸಿಕೊಂಡ ಕಾಶ್ಮೀರದ ವಿದ್ಯಾರ್ಥಿಗಳು

Update: 2019-08-12 11:34 GMT

ಚಂಡಿಗಡ, ಆ.12: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈದ್ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಭೋಜನ ಕೂಟಕ್ಕೆ ಪಂಜಾಬ್‌ನ ವಿವಿಧ ಯುನಿವರ್ಸಿಟಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಾಶ್ಮೀರದ ಸುಮಾರು 125 ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘‘ಇಂದು ಇಲ್ಲಿಗೆ ಬಂದ ಮೇಲೆ ನಮಗೆ ಕುಟುಂಬದ ನೆನಪಾಗುತ್ತಿದೆ’’ಎಂದು ಭೋಜನಕೂಟದಲ್ಲಿ ಭಾಗವಹಿಸಿದ್ದ ಕಾಶ್ಮೀರದ ವಿದ್ಯಾರ್ಥಿನಿ ಫರ್ಝಾನಾ ಹಫೀಝ್ ಹೇಳಿದ್ದಾರೆ.

 ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಧಿ 370ನ್ನು ಕೇಂದ್ರ ಸರಕಾರ ರದ್ದುಪಡಿಸಿದ ಬಳಿಕ ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಿರುವುದರಿಂದ ಆ ರಾಜ್ಯದ ವಿದ್ಯಾರ್ಥಿಗಳು ತಮ್ಮ ಮನೆಯಿಂದ ಹೊರಗೆ ಈದ್ ಹಬ್ಬವನ್ನು ಆಚರಿಸುವಂತಾಗಿದೆ.

ಚಂಡಿಗಢ ಯುನಿವರ್ಸಿಟಿ, ಚಿಟ್ಕಾರ ಯುನಿವರ್ಸಿಟಿ, ಎಸ್‌ವಿಐಇಟಿ ಯುನಿವರ್ಸಿಟಿ ಬಾನ್ಸುರ್, ಸಿಟಿ ಯುನಿವರ್ಸಿಟಿ, ಲುಧಿಯಾನ, ಲವ್ಲಿ ಯುನಿವರ್ಸಿಟಿ ಹಾಗೂ ಸ್ವಿಫ್ಟ್ ಕಾಲೇಜ್ ರಾಜ್‌ಪುರದ ಕಾಶ್ಮೀರದ ವಿದ್ಯಾರ್ಥಿಗಳು ಸಿಎಂ ಅಮರಿಂದರ್ ಸಿಂಗ್ ಪಂಜಾಬ್ ಭವನದಲ್ಲಿ ಈದ್ ನಿಮಿತ್ತ ಏರ್ಪಡಿಸಿದ್ದ ಭೋಜನ ಕೂಟಕ್ಕೆ ನೀಡಿರುವ ಆಹ್ವಾನ ಸ್ವೀಕರಿಸಿ ಹಾಜರಾಗಿದ್ದರು.

 ‘‘ಪಂಜಾಬ್ ನಮಗೆ ಎರಡನೇ ಮನೆಯಿದ್ದಂತೆ. ಪುಲ್ವಾಮ ದಾಳಿಯ ಬಳಿಕವೂ ನಮಗೆ ಇಲ್ಲಿ ಯಾವಾಗಲೂ ಸುರಕ್ಷಿತ ಎಂಬ ಭಾವನೆ ಉಂಟಾಗಿತ್ತು. ಪಂಜಾಬಿಗರ ಹೃದಯ ದೊಡ್ಡದು ಎಂಬುದನ್ನು ನಾವು ನೋಡಿದ್ದೇವೆ’’ ಎಂದು ಕಾಶ್ಮೀರದ ವಿದ್ಯಾರ್ಥಿ ಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News