ಪ್ರವಾಹಪೀಡಿತ ಕೇರಳದಲ್ಲಿ ಹೃದಯ ಗೆದ್ದ ಬಟ್ಟೆ ವ್ಯಾಪಾರಿ ನೌಶಾದ್‌

Update: 2019-08-13 04:05 GMT

ಕೊಚ್ಚಿನ್, ಆ.13: ಈದ್ ಹಬ್ಬದ ಸಂದರ್ಭದಲ್ಲಿ ಮಾರಾಟಕ್ಕಾಗಿ ಗೋದಾಮಿನಲ್ಲಿ ಇಟ್ಟಿದ್ದ ಬಟ್ಟೆಯ ಹೊಸ ಬಂಡಲ್ ತೆರೆದು, ಪ್ರವಾಹ ಸಂತ್ರಸ್ತರಿಗೆ ದಾನ ಮಾಡುವ ನಿರ್ಧಾರದಲ್ಲಿ ನೌಶಾದ್‌ಗೆ ಯಾವ ದ್ವಂದ್ವವೂ ಇರಲಿಲ್ಲ. ಉತ್ತರ ಕೇರಳದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿರುವ ಸಂತ್ರಸ್ತರ ನೆರವಿಗೆ ಇವರು ಸ್ಪಂದಿಸಿದ ಪರಿ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.

ಮಾರಾಟಕ್ಕಾಗಿ ತಂದಿದ್ದ ಹೊಸ ಸಿದ್ಧ ಉಡುಪುಗಳನ್ನು ದೊಡ್ಡ ಚೀಲಗಳಲ್ಲಿ ತುಂಬಿಕೊಂಡು, ಸ್ವತಃ ತಲೆ ಮೇಲೆ ಹೊತ್ತುಕೊಂಡು ವಾಹನಕ್ಕೆ ಒಯ್ದು ಪರಿಹಾರ ಶಿಬಿರಗಳಿಗೆ ವಿತರಿಸಿ, ಎಲ್ಲರ ಹೃದಯ ಗೆದ್ದರು. ಇದರಲ್ಲೇನು ವಿಶೇಷ ಎಂದು ಮೂಗು ಮುರಿಯಬೇಡಿ. ನೌಶಾದ್ ದೊಡ್ಡ ಬಟ್ಟೆ ಅಂಗಡಿ ಮಾಲಕರೂ ಅಲ್ಲ; ಅಗರ್ಭ ಶ್ರೀಮಂತರಂತೂ ಅಲ್ಲವೇ ಅಲ್ಲ. ಒಬ್ಬ ಸಾಮಾನ್ಯ ಬೀದಿಬದಿ ವ್ಯಾಪಾರಿ. ನಿರಾಶ್ರಿತರಿಗಾಗಿ ದೇಣಿಗೆ ನೀಡುವಂತೆ ಸ್ವಯಂಸೇವಾ ಸಂಸ್ಥೆಯೊಂದು ಸಂಪರ್ಕಿಸಿದಾಗ, ಹಿಂದು ಮುಂದು ನೋಡದೇ, ಹಬ್ಬದ ಮಾರಾಟಕ್ಕಾಗಿ ತಂದಿದ್ದ 10 ಮೂಟೆ ಬಟ್ಟೆಯನ್ನು ಉದಾರವಾಗಿ ದಾನ ಮಾಡಿದರು.

ಬಹುತೇಕ ಮಂದಿ ಬಳಸಿದ ಬಟ್ಟೆ ಅಥವಾ ತಮ್ಮ ಆದಾಯದ ಒಂದು ಭಾಗವನ್ನು ನೀಡುವ ಮೂಲಕ ಸಂತ್ರಸ್ತರಿಗೆ ನೆರವಾಗುತ್ತಿದ್ದರೆ, ನೌಶಾದ್ ಮಾತ್ರ ತಮ್ಮೆಲ್ಲ ಗಳಿಕೆಯನ್ನು ಸಮರ್ಪಿಸಿ, ಇದುವರೆಗೆ ಮುಖವನ್ನೂ ನೋಡದ ನಿರಾಶ್ರಿತರ ಮುಖದಲ್ಲಿ ಮಂದಹಾಸ ಮೂಡಲು ಕಾರಣರಾದರು. ಈ ಮೂಲಕ ಅನುಕಂಪ ಹಾಗೂ ಭ್ರಾತೃತ್ವಕ್ಕೆ ಹೊಸ ಭಾಷ್ಯ ಬರೆದರು.

ಪುಟ್ಟ ಗೋದಾಮಿನಲ್ಲಿ ಬಟ್ಟೆಗಳನ್ನು ಪ್ಯಾಕ್ ಮಾಡಿ, ವಾಹನಕ್ಕೆ ಹೊತ್ತೊಯ್ದು ಕಳುಹಿಸುವುದರಲ್ಲಿ ತಲ್ಲೀನರಾಗಿದ್ದ ನೌಶಾದ್ (40) ಅವರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ನೀವು ಸಾಮರ್ಥ್ಯಕ್ಕಿಂತ ಹೆಚ್ಚು ನೀಡುತ್ತಿದ್ದೀರಿ; ಇದು ನಿಮ್ಮ ಮಾರಾಟಕ್ಕೆ ಧಕ್ಕೆಯಾಗಬಹುದು" ಎಂದು ಕಾರ್ಯಕರ್ತರು ಹೇಳಿದ್ದನ್ನು ಲೆಕ್ಕಿಸದೇ ಸರ್ವಸ್ವವನ್ನೂ ದಾನ ಮಾಡಿ ಮಾನವೀಯತೆ ಮೆರೆದರು.

"ನಾವು ಇಲ್ಲಿಂದ ಹೋಗುವಾಗ ಏನನ್ನೂ ಒಯ್ಯುವುದಿಲ್ಲ.. ನನ್ನ ಲಾಭ ಅಗತ್ಯವಿರುವವರಿಗೆ ನೆರವು ನೀಡುವ ಸಲುವಾಗಿ.. ಇದು ನಾವು ಈದ್ ಆಚರಿಸಬೇಕಾದ ವಿಧಾನವಲ್ಲವೇ? ನನ್ನ ಈದ್ ಹೀಗೆ.." ಎಂದು ನೌಶಾದ್ ಹೇಳುತ್ತಾರೆ.

ತಾವು ಮಾಡಿದ ದಾನ ಸಂತ್ರಸ್ತರನ್ನು ಖಂಡಿತವಾಗಿಯೂ ತಲುಪುತ್ತದೆ ಎಂಬ ಖಾತ್ರಿ ಇದೆ. "ಇದು ಬಡಜನರಿಗಾಗಿ ಇರುವುದು. ಲಾಭ ನಷ್ಟದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ನೌಶಾದ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News