ಕತ್ತಿ ಝಳಪಿಸುತ್ತಾ ಬಂದ ಕಳ್ಳರನ್ನು ಚಪ್ಪಲಿಯಲ್ಲಿ ಹೊಡೆದು ಓಡಿಸಿದ ಹಿರಿಯ ದಂಪತಿ

Update: 2019-08-13 07:54 GMT

ತಿರುನೆಲ್ವೇಲಿ,  ಆ.13: ತಮ್ಮ ಮನೆಗೆ ನುಗ್ಗಲೆತ್ನಿಸಿದ್ದ ಇಬ್ಬರು ಸಶಸ್ತ್ರಧಾರಿ ಕಳ್ಳರನ್ನು ಹೊಡೆದೋಡಿಸಿದ ತಮಿಳುನಾಡಿನ ವೃದ್ಧ ದಂಪತಿಯ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ತಮ್ಮ ಕೈಗೆ ಸಿಕ್ಕಿದ ವಸ್ತುವನ್ನು ಬಳಸಿ ಕಳ್ಳರನ್ನು ಈ ಹಿರಿಯ ದಂಪತಿ ಎದುರಿಸಿದ ಪರಿ ಎಲ್ಲರ ಶ್ಲಾಘನೆಗೆ  ಒಳಗಾಗಿದೆ. ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ತೋಟದ ಮನೆಯೊಂದರ ಹೊರ ಆವರಣದಲ್ಲಿ ನಡೆದಿದೆ.

ಮನೆಯ ಯಜಮಾನ ಷಣ್ಮುಗವೇಲ್ (70) ರವಿವಾರ ರಾತ್ರಿ ಮನೆಯ ಪಡಸಾಲೆಯಲ್ಲಿ ಕುಳಿತಿದ್ದಾಗ ಕೈಯ್ಯಲ್ಲಿ ತಲವಾರು ಝಳಪಿಸುತ್ತಾ ಅಲ್ಲಿಗೆ ಆಗಮಿಸಿದ ಇಬ್ಬರು ಕಳ್ಳರಲ್ಲಿ ಒಬ್ಬಾತ ಷಣ್ಮುಗವೇಲ್ ಅವರ ಕುತ್ತಿಗೆಗೆ ಬಟ್ಟೆ ಬಿಗಿಯಲೆತ್ನಿಸುತ್ತಿರುವುದೂ ಕಾಣಿಸುತ್ತದೆ. ಷಣ್ಮುಗ ಅವರು ಜೋರಾಗಿ ಚೀರಿ  ಇನ್ನೊಬ್ಬ ಕಳ್ಳನನ್ನು  ತುಳಿಯಲು ಯತ್ನಿಸುತ್ತಿರುವಂತೆಯೇ ಅವರ ಪತ್ನಿ 65 ವರ್ಷದ ಸೆಂದಾಮರೈ ಮನೆಯೊಳಗಡೆಯಿಂದ ಧಾವಿಸಿ ಹೊರ ಬರುತ್ತಾರೆ. ಅಲ್ಲಿದ್ದ ಚಪ್ಪಲಿಯನ್ನು ಕುರ್ಚಿ, ಸ್ಟೂಲುಗಳನ್ನೆತ್ತಿ ಅವರು ಕಳ್ಳರತ್ತ ಬೀಸುತ್ತಾರೆ. ಅಷ್ಟರೊಳಗೆ  ಷಣ್ಮುಗ  ಕೂಡ ಸಾವರಿಸಿಕೊಂಡು  ಕಳ್ಳರ ಮೇಲೆ ದಾಳಿ ನಡೆಸುತ್ತಾರೆ. ಘಟನೆಯಲ್ಲಿ ಮಹಿಳೆಯ ಬಲಗೈಗೆ ಪೆಟ್ಟಾಗಿದ್ದು ಕಳ್ಳರು ಅವರ ಕೊರಳಲ್ಲಿದ್ದ 33 ಗ್ರಾಂ ತೂಕದ ಚಿನ್ನದ ಸರವನ್ನು ಸೆಳೆದು ಪರಾರಿಯಾಗಿದ್ದಾರೆ.

ಆ ಮನೆಯಲ್ಲಿ ದಂಪತಿ ಇಬ್ಬರೇ ವಾಸವಾಗಿದ್ದು ರವಿವಾರ ರಾತ್ರಿ ಸುಮಾರು 9 ಗಂಟೆಯ ಹೊತ್ತಿಗೆ ಘಟನೆ ನಡೆದಿದೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News