'ದೋವಲ್ ಎಂದು ಗೊತ್ತಿದ್ದರೆ ಹೋಗುತ್ತಿರಲಿಲ್ಲ': ರಾಷ್ಟ್ರೀಯ ಭದ್ರತಾ ಸಲಹೆಗಾರರ ವೀಡಿಯೋದಲ್ಲಿದ್ದ ಕಾಶ್ಮೀರಿ ವ್ಯಕ್ತಿ

Update: 2019-08-13 10:33 GMT

ಹೊಸದಿಲ್ಲಿ, ಆ.10: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್  ಅವರು ಶೋಪಿಯಾನ್ ನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿದ್ದ ಪ್ರದೇಶದ ರಸ್ತೆ ಬದಿಯಲ್ಲಿ ನಿಂತು ಸಣ್ಣ  ಗುಂಪೊಂದರ ಜತೆಗೆ ಊಟ ಮಾಡುತ್ತಿರುವ ವೀಡಿಯೋವನ್ನು ಸರಕಾರ ಆಗಸ್ಟ್ 7ರಂದು ಬಿಡುಗಡೆಗೊಳಿಸಿತ್ತು. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ರಾಜ್ಯದಲ್ಲಿರುವ ಅಭೂತಪೂರ್ವ ನಿರ್ಬಂಧಗಳ ಹೊರತಾಗಿಯೂ ಅಲ್ಲಿನ ಸ್ಥಿತಿ ಸಾಮಾನ್ಯವಾಗಿದೆ ಎಂದು ಮನದಟ್ಟು ಮಾಡಲು ಸರಕಾರ ಯತ್ನಿಸಿತ್ತು.

ಆದರೆ ಆ ವೀಡಿಯೋದಲ್ಲಿ ಕಾಣಿಸಿರುವ ಹಲವು ವ್ಯಕ್ತಿಗಳಲ್ಲಿ ಒಬ್ಬರಾಗಿರುವ  62 ವರ್ಷದ ಮನ್ಸೂರ್ ಅಹ್ಮದ್ ಎಂಬವರಿಗೆ ಆಗ ತಾನು ರಾಷ್ಟ್ರೀಯ ಭದ್ರತಾ ಸಲ ಸಲಹೆಗಾರ ದೋವಲ್ ಜತೆಗೆ ಮಾತನಾಡಿದ್ದೆಂದು  ತಿಳಿದಿರಲಿಲ್ಲ, ತಿಳಿದಿದ್ದರೆ ಹೋಗುತ್ತಿರಲಿಲ್ಲ  ಎಂದವರು ಹೇಳಿದ್ದಾರೆ.

 ಆ ವೀಡಿಯೋದಲ್ಲಿ ವೈಸ್ಟ್ ಕೋಟ್ ಧರಿಸಿರುವ ಹಾಗೂ ತಲೆಗೂದಲಿಗೆ ಮೆಹಂದಿ ಬಣ್ಣ ಹೊಂದಿರುವ, ಬಿಳಿ ಗಡ್ಡದ  ವ್ಯಕ್ತಿಯೇ ಸಾಮಾಜಿಕ ಕಾರ್ಯಕರ್ತ ಹಾಗೂ ಮಾಜಿ ವಲಯ ಅರಣ್ಯಾಧಿಕಾರಿಯಾಗಿರುವ ಮನ್ಸೂರ್ ಅಹ್ಮದ್. ಈ  ಘಟನೆಯ ನಂತರ ಎಲ್ಲರೂ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಸಂಶಯದಿಂದ ನೋಡುತ್ತಾರೆ ಎಂದು ಅವರು ವಿವರಿಸುತ್ತಾರೆ.

 ಆ ಘಟನೆ ನಂತರ ಮನೆಗೆ ಬಂದು ತಾವು ಯಾರೋ ದೋವಲ್ ಜತೆಗೆ ಮಾತನಾಡಿದ್ದಾಗಿ ಮಲಗಿದ್ದ ಮಗನನ್ನು ಎಬ್ಬಿಸಿ ಹೇಳಿದಾಗ ಆತ ಆಘಾತಗೊಂಡು ಅದು  ಟಿವಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದಿದ್ದ ಎಂದು ಮನ್ಸೂರ್ ವಿವರಿಸುತ್ತಾರೆ.

``ನಾನು ದೋವಲ್ ಭೇಟಿಯಾಗಲಿದ್ದೇನೆ ಎಂದು ನನಗೆ ಮುಂಚಿತವಾಗಿಯೇ ತಿಳಿದಿದ್ದರೆ ಖಂಡಿತವಾಗಿಯೂ ಅವರು ಎಳೆದುಕೊಂಡು ಹೋದರೂ ಹೋಗುತ್ತಿರಲಿಲ್ಲ. ಈ ವೀಡಿಯೋ ನನ್ನ ಜೀವನವನ್ನೇ ಬದಲಾಯಿಸಿ ಬಿಟ್ಟಿದೆ'' ಎಂದು ಅವರು ಹೇಳುತ್ತಾರೆ.

ಈ ವೀಡಿಯೋ ನೋಡಿದ ನಂತರ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ `ಹಣದಿಂದ ಏನನ್ನೂ ಖರೀದಿಸಬಹುದು’ ಎಂದು ಹೇಳಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮನ್ಸೂರ್ ಕುಟುಂಬ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದೆ.

ಶೋಪಿಯನ್ ನ ಅಲಿಯಲ್ಪೊರ ನಿವಾಸಿಯಾಗಿರುವ  ಮನ್ಸೂರ್ ಅಹ್ಮದ್ ಸ್ಥಳೀಯ ಮಸೀದಿ ಸಮಿತಿಯ ಮುಖ್ಯಸ್ಥರೂ ಹಿರಿಯ ನಾಗರಿಕರ ವೇದಿಕೆಯ ರಾಜ್ಯ ಸಂಘಟಕರೂ ಆಗಿದ್ದಾರೆ.

ಶುಕ್ರವಾರದ ಪ್ರಾರ್ಥನೆಗೆ ಮಸೀದಿಗೆ ತೆರಳಲು ಹೊರಬಂದಿದ್ದ ಸಂದರ್ಭ ಡಿಜಿಪಿ ನಿಮ್ಮನ್ನು ಭೇಟಿಯಾಗಬೇಕು ಎಂದು ಪೊಲೀಸರು ಹೇಳಿದ್ದಕ್ಕೆ ಅವರ ಬೈಕಿನಲ್ಲಿ ಪೊಲೀಸ್ ಠಾಣೆಗೆ ತೆರಳಿದ್ದೆ. ಅಲ್ಲಿ ಆದಾಗಲೇ  ಐದಾರು ಮಂದಿ ಇದ್ದರು. ತನ್ನನ್ನು ಆ್ಯಂಬುಲೆನ್ಸ್ ನಲ್ಲಿ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಲಾಯಿತು. ಕ್ಯಾಮರಾ ಹಿಡಿದವರೂ ಇದ್ದರು  ಎಂದು ವಿವರಿಸಿದ್ದಾರೆ.

“ಅಲ್ಲಿ ಶೋಪಿಯನ್ ಎಸ್‍ಪಿ ಸಂದೀಪ್ ಸಿಂಗ್ ಹಾಗೂ ಡಿಜಿಪಿ ಸಿಂಗ್ ಇದ್ದರಲ್ಲದೆ ನಾನು ಯಾರೊಂದಿಗೋ ಮಾತನಾಡಬೇಕೆಂದರು. ಅಷ್ಟರೊಳಗಾಗಿ ಜಾಕೆಟ್ ಧರಿಸಿದ್ದ ವ್ಯಕ್ತಿ ಬಂದರು. ನಾನು ಅವರು ಡಿಜಿಯವರ ಕಾರ್ಯದರ್ಶಿ ಎಂದು ಅಂದುಕೊಂಡೆ. ಅವರು 370ನೇ ವಿಧಿ ರದ್ದುಗೊಂಡಿದೆ ಎಂದಾಗ ‘ನಾನೇನು ಹೇಳಲು ಸಾಧ್ಯವಿಲ್ಲ, ಜನರಿಗೆ  ಪ್ರಯೋಜನವಾಗಲಿದೆ ಇನ್ಶಾ ಅಲ್ಲಾಹ್’ ಎಂದೆ. “ಶೋಪಿಯನ್ ಇತಿಹಾಸದ ಬಗ್ಗೆ ಆ ವ್ಯಕ್ತಿಗೆ ಹೇಳಿದೆ.  ಆ ವ್ಯಕ್ತಿ 10-15 ನಿಮಿಷ  ಮಾತನಾಡಿದ ನಂತರ ಊಟ ಮಾಡುವಂತೆ ಹೇಳಿದರು. ಅಷ್ಟೊತ್ತಿಗೆ ಯಾರೋ ಒಂದು ಪ್ಲೇಟ್ ನನ್ನ ಕೈಗಿತ್ತರು. ಜನರು ಅದು ಬಿರಿಯಾನಿ ಎಂದಿದ್ದಾರೆ. ಆದರೆ  ಅದು ಅನ್ನ ಮತ್ತು ಒಂದು ತುಂಡು ಮಾಂಸ” ಎಂದು ಮನ್ಸೂರ್ ಹೇಳುತ್ತಾರೆ.

ಆ ವೀಡಿಯೋ ಹೊರಬಿದ್ದ ನಂತರ ಹೊರ ಹೋಗುವುದು ಕಷ್ಟವಾಗುತ್ತಿದೆ. ತಮಗೆ ಕೆಟ್ಟ ಹೆಸರು ತಂದಿದ್ದಾಗಿ ಸಂಬಂಧಿಕರು ಹೇಳುತ್ತಿದ್ದಾರೆ ಎಂದು ಮನ್ಸೂರ್ ದುಃಖದಿಂದ ನುಡಿಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News