ಬಾಲ್ಯದಲ್ಲಿ ಮನೆಗೆ ಮೊಸಳೆ ಮರಿ ತಂದಿದ್ದೆ: ‘ಮ್ಯಾನ್ ವರ್ಸಸ್ ವೈಲ್ಡ್' ಶೋನಲ್ಲಿ ಮೋದಿ

Update: 2019-08-13 11:22 GMT

ಹೊಸದಿಲ್ಲಿ, ಆ.13: ಸೋಮವಾರ ರಾತ್ರಿ 9 ಗಂಟೆಗೆ ‘ಡಿಸ್ಕವರಿ’ ಚಾನೆಲ್ ನಲ್ಲಿ ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿ ಹಾಗೂ   ಬೇರ್ ಗ್ರಿಲ್ಸ್ ಅವರು ದಟ್ಟಾರಣ್ಯಗಳಲ್ಲಿ ಸಂಚರಿಸುವ ‘ಮ್ಯಾನ್ ವರ್ಸಸ್ ವೈಲ್ಡ್' ಶೋ ಸಾಕಷ್ಟು ಜನರ ಗಮನಸೆಳೆದಿದೆ.

ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕಿನಲ್ಲಿ ಕಾಡು ಪಯಣದ ವೇಳೆ ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಬಗ್ಗೆ ತಮ್ಮ ಪ್ರಕೃತಿ ಪ್ರೇಮದ ಬಗ್ಗೆ  ಹೇಳಿಕೊಂಡಿದ್ದಾರೆ.

ಜನರ ಆಶೋತ್ತರಗಳನ್ನು  ಈಡೇರಿಸುವುದು ತಮಗೆ ಖುಷಿ ನೀಡುತ್ತದೆ ಹಾಗೂ ಅಭಿವೃದ್ಧಿಯೇ ತಮ್ಮ ಪ್ರಮುಖ ಉದ್ದೇಶ ಎಂದೂ ಅವರು ಹೇಳಿಕೊಂಡಿದ್ದಾರೆ. ಈ ಶೋನಲ್ಲಿ ಪ್ರಧಾನಿಯ ಕೆಲ ಮಾತುಗಳು ಇಂತಿವೆ.

ಪ್ರಕೃತಿಯ ಕುರಿತು: ‘ಹುಲಿಗಳಿಂದ ತುಂಬಿರುವ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಸಾಗಲು ಸಿದ್ಧರಿದ್ದೀರಾ’ ಎಂದು ಗ್ರಿಲ್ಸ್ ಕೇಳಿದಾಗ ಈ ಅನುಭವ `ಅಪಾಯಕಾರಿ' ಎಂದು ತಾನು ಪರಿಗಣಿಸುವುದಿಲ್ಲ ಎಂದಿದ್ದಾರೆ.

“ಪ್ರಕೃತಿಯ ಬಗ್ಗೆ ನೀವು ಭಯಪಡಲೇಬಾರದು. ನಾವು ಪ್ರಕೃತಿಯೊಂದಿಗೆ ಸಂಘರ್ಷದಲ್ಲಿದ್ದೇವೆ ಎಂಬ ಯೋಚನೆಯಿಂದಲೇ ಸಮಸ್ಯೆಗಳು ಆರಂಭಗೊಳ್ಳುತ್ತವೆ” ಎಂದಿದ್ದಾರೆ ಮೋದಿ.

ಪ್ರಧಾನಿ ಆಗಿರುವ ಬಗ್ಗೆ

“ನಾನ್ಯಾರೆಂಬ  ಬಗ್ಗೆ ನಾನು ಯೋಚಿಸುವುದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಈಗ ಪ್ರಧಾನಿಯಾಗಿರುವಾಗ ನಾನು ಕೇವಲ ನನ್ನ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಯೋಚಿಸುತ್ತೇನೆ. ನನ್ನ ಸ್ಥಾನ ನನ್ನ ತಲೆಗೇರುವುದಿಲ್ಲ'' ಎಂದು ಪ್ರಧಾನಿ ಹೇಳಿದರು.

ರಜೆಯ ಬಗ್ಗೆ ಮಾತನಾಡಿದ ಪ್ರಧಾನಿ, “ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಈ ಟ್ರಿಪ್ ಕಳೆದ 18 ವರ್ಷಗಳಲ್ಲಿ ನನ್ನ ಮೊದಲ ರಜಾ ಆಗಿದೆ'' ಎಂದರು.

ಶಾಲಾ ದಿನಗಳ ಬಗ್ಗೆ

“ಬಡತನದ ಹೊರತಾಗಿಯೂ ಶಾಲೆಗೆ ಹೋಗುವಾಗ ನೀಟಾಗಿರಬೇಕೆಂದು ಯಾವತ್ತೂ ತಾಮ್ರದ ಪಾತ್ರೆಗೆ ಇದ್ದಿಲನ್ನು ಹಾಕಿ ಸಮವಸ್ತ್ರಕ್ಕೆ ಇಸ್ತ್ರಿ ಮಾಡುತ್ತಿದ್ದೆ'' ಎಂದು ಮೋದಿ ಹೇಳಿದ್ದಾರೆ.

ಬಾಲ್ಯದ ಬಗ್ಗೆ ಮಾತನಾಡಿ, ಒಮ್ಮೆ ಸ್ನಾನ ಮಾಡಲು ಹೋದ ಸಂದರ್ಭ ಕೊಳವೊಂದರಿಂದ ಮೊಸಳೆ ಮರಿಯನ್ನು ಮನೆಗೆ ತಂದ ಬಗ್ಗೆ ಹೇಳಿಕೊಂಡ ಮೋದಿ, “ಇದು ತಪ್ಪು ಎಂದು ತಾಯಿ ಹೇಳಿದರು. ನೀನು ಹೀಗೆ ಮಾಡುವ ಹಾಗಿಲ್ಲ, ಅದನ್ನು ಹಿಂದಕ್ಕೆ ಹಾಕು ಎಂದಾಗ ನಾನು ಹಾಗೆಯೇ ಮಾಡಿದೆ'' ಎಂದು ನೆನಪಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News