ಆಟೋಮೊಬೈಲ್ ಕ್ಷೇತ್ರ ಬಿಕ್ಕಟ್ಟಿನಲ್ಲಿ: 2.3 ಲಕ್ಷ ಉದ್ಯೋಗ ನಷ್ಟ!

Update: 2019-08-13 14:06 GMT

ಹೊಸದಿಲ್ಲಿ, ಆ.13: ಭಾರತದ ಆಟೋಮೊಬೈಲ್ ಕ್ಷೇತ್ರ ಕಳೆದೆರಡು ದಶಕಗಳಲ್ಲಿಯೇ ಕಂಡು ಕೇಳರಿಯದಂತಹ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸೊಸೈಟಿ ಫಾರ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ ಕ್ಷೇತ್ರದಲ್ಲಿ 2.30 ಲಕ್ಷ ಉದ್ಯೋಗ ನಷ್ಟ ಸಂಭವಿಸಿದೆ ಎಂದು indiatoday.in ವರದಿ ಮಾಡಿದೆ.

ಜತೆಗೆ ಜುಲೈ 2019ರಲ್ಲಿ ಪ್ಯಾಸೆಂಜರ್ ಕಾರುಗಳ ಮಾರಾಟದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಶೇ.35ರಷ್ಟು ಕುಸಿತ ಕಂಡಿದೆ ಎಂದು ಎಂದು indiatoday.in ವರದಿ ತಿಳಿಸಿದೆ.

ರಾಜಧಾನಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸೊಸೈಟಿಯ ಮಹಾ ನಿರ್ದೇಶಕ ವಿಷ್ಣು ಮಾಥುರ್, ಮೇಲಿನ ಮಾಹಿತಿ ನೀಡಿದರಲ್ಲದೆ ಕಳೆದ 19 ವರ್ಷಗಳಲ್ಲಿ ಕ್ಷೇತ್ರ ಇಂತಹ ಬಿಕ್ಕಟ್ಟು ಎದುರಿಸಿರಲಿಲ್ಲ. ಈ ಹಿಂದೆ ಡಿಸೆಂಬರ್ 2000ರಲ್ಲಿ ಇಂತಹ ಒಂದು  ಬಿಕ್ಕಟ್ಟು ಎದುರಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿಗಿನ ದಿನಗಳಲ್ಲಿ 300 ಡೀಲರ್‍ಶಿಪ್ ಸಂಸ್ಥೆಗಳು ಬಾಗಿಲು ಮುಚ್ಚಿವೆ ಹಾಗೂ ಆಟೋಮೊಬೈಲ್ ಬಿಡಿ ಭಾಗಗಳ ತಯಾರಿಕಾ ರಂಗದಲ್ಲಿ 10  ಲಕ್ಷ ಉದ್ಯೋಗಗಳು ಬಾಧಿತವಾಗಿವೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಜುಲೈ 2019ರಲ್ಲಿ ಮಾರಾಟ ಪ್ರಮಾಣದಲ್ಲಿ ಶೇ 18ರಷ್ಟು ಇಳಿಕೆಯಾಗಿದೆ. ವಾಣಿಜ್ಯ ವಾಹನಗಳ ಮಾರಾಟ ಪ್ರಮಾಣದಲ್ಲಿ ಶೇ 25ರಷ್ಟು ಕುಸಿತ ಕಂಡಿದ್ದರೆ, ದ್ವಿಚಕ್ರ ವಾಹನಗಳ ಮಾರಾಟ ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷ ಶೇ 16ರಷ್ಟು ಕುಸಿತ ಕಂಡಿದೆ ಎಂದಿದ್ದಾರೆ ಎಂದು indiatoday.in ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News