ಬುಡಕಟ್ಟು ನಿವಾಸಿಗಳ ಮಾರಣಹೋಮ ನಡೆದಿದ್ದ ಸೋನಭದ್ರಾ ಜಿಲ್ಲೆಯ ಗ್ರಾಮಕ್ಕೆ ಪ್ರಿಯಾಂಕಾ ಭೇಟಿ

Update: 2019-08-13 14:22 GMT

ವಾರಣಾಸಿ, ಆ.13: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋನಿಯಾ ಗಾಂಧಿ ವಾದ್ರಾ ಅವರು ಮಂಗಳವಾರ ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯ ಉಂಭಾ ಗ್ರಾಮಕ್ಕೆ ಭೇಟಿ ನೀಡಿ,ಜುಲೈ 17ರಂದು ಭೂವಿವಾದದಲ್ಲಿ ಕೊಲ್ಲಲ್ಪಟ್ಟಿದ್ದ 10 ಬುಡಕಟ್ಟು ನಿವಾಸಿಗಳ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಅವರು,ಪ್ರದೇಶದಲ್ಲಿ ಅಭಿವೃದ್ಧಿ ಕೊರತೆಯ ಬಗ್ಗೆ ಅವರಿಂದ ಮಾಹಿತಿಗಳನ್ನು ಪಡೆದರು. ಕಾಂಗ್ರೆಸ್ ಪಕ್ಷ ಸದಾ ನಿಮ್ಮ ಬೆಂಬಲಕ್ಕಿದೆ ಎಂಬ ಭರವಸೆ ನೀಡಿದರು. ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಗಳನ್ನೂ ಅವರು ಭೇಟಿಯಾದರು.

ಉಂಭಾ ಗ್ರಾಮದಲ್ಲಿ 90 ಬಿಘಾ ಜಮೀನಿಗೆ ಸಂಬಂಧಿಸಿದ ವಿವಾದದಲ್ಲಿ ಘರ್ಷಣೆ ನಡೆದು ಗ್ರಾಮದ ಮುಖ್ಯಸ್ಥ ಯಜ್ಞ ದತ್ತ ಮತ್ತು ಆತನ ನೂರಾರು ಸಹಚರರು ಗೊಂಡ ಬುಡಕಟ್ಟು ಜನಾಂಗಕ್ಕೆ ಸೇರಿದ 10 ವ್ಯಕ್ತಿಗಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. 26 ಜನರು ಗಾಯಗೊಂಡಿದ್ದರು.

ಘಟನೆಯ ಬಳಿಕ ಜು.19ರಂದು ಮೃತರ ಕುಟುಂಬಗಳನ್ನು ಭೇಟಿಯಾಗಲು ತೆರಳಿದ್ದ ಪ್ರಿಯಾಂಕಾರನ್ನು ಮಿರ್ಝಾಪುರ ಜಿಲ್ಲಾಡಳಿತವು ತಡೆದಿತ್ತು ಮತ್ತು ಅವರನ್ನು ಚುನರ್ ಅತಿಥಿ ಗೃಹದಲ್ಲಿರಿಸಲಾಗಿತ್ತು. ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗದೇ ಮರಳುವುದಿಲ್ಲ ಎಂದು ಪ್ರಿಯಾಂಕಾ ಪಟ್ಟು ಹಿಡಿದಾಗ ಅಂತಿಮವಾಗಿ ಜಿಲ್ಲಾಡಳಿತವು ಕೆಲವು ಕುಟುಂಬಗಳನ್ನು ಅತಿಥಿ ಗೃಹಕ್ಕೆ ಕರೆತಂದಿತ್ತು.

ತನ್ಮಧ್ಯೆ ಸೋನಭದ್ರಾಕ್ಕೆ ಪ್ರಿಯಾಂಕಾರ ಭೇಟಿಯು ರಾಜಕೀಯ ಗಿಮಿಕ್ ಆಗಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ ಶರ್ಮಾ ಹೇಳಿದರೆ, ಈ ಭೇಟಿಯು ಕೇವಲ ನಾಟಕವಾಗಿದೆ ಎಂದು ಬಿಜೆಪಿ ವಕ್ತಾರ ಚಂದ್ರಮೋಹನ ಅವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News