ಶಶಿ ತರೂರ್‌ ವಿರುದ್ಧ ಬಂಧನ ವಾರಂಟ್ ಜಾರಿ

Update: 2019-08-13 15:37 GMT

ಹೊಸದಿಲ್ಲಿ, ಆ. 13: ‘ಹಿಂದೂ-ಪಾಕಿಸ್ತಾನ್’ ಹೇಳಿಕೆ ಕುರಿತು ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ವಿರುದ್ಧ ಕೋಲ್ಕತ್ತಾ ನ್ಯಾಯಾಲಯ ಮಂಗಳವಾರ ಬಂಧನಾದೇಶ ಜಾರಿಗೊಳಿಸಿದೆ.

ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ಬಿಜೆಪಿ ‘ಹಿಂದೂ-ಪಾಕಿಸ್ತಾನ’ ಸೃಷ್ಟಿಗೆ ದಾರಿ ಮಾಡಿ ಕೊಡಲಿದೆ ಎಂಬ ಶಶಿ ತರೂರ್ ಅವರ ಹೇಳಿಕೆ ಪ್ರಶ್ನಿಸಿ ನ್ಯಾಯವಾದಿ ಸುಮೀತ್ ಚೌಧುರಿ ಕೋಲ್ಕತಾ ಮ್ಯಾಜಿಸ್ಟ್ರೇಟ್ ಮೆಟ್ರೋಪಾಲಿಟಿನ್ ಕೋರ್ಟ್‌ಗೆ ಜುಲೈಯಲ್ಲಿ ಮನವಿ ಸಲ್ಲಿಸಿದ್ದರು.

ತರೂರ್ ಅವರ ಹೇಳಿಕೆ ಸಾಮರಸ್ಯ ಕದಡಿದೆ ಹಾಗೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶವನ್ನು ಹೊಂದಿದೆ ಎಂದು ದೂರುದಾರ ಚೌಧುರಿ ಮನವಿಯಲ್ಲಿ ಆರೋಪಿಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಬಿಜೆಪಿ ಸಂವಿಧಾನವನ್ನು ಮರು ಬರೆಯಲಿದೆ ಹಾಗೂ ಪಾಕಿಸ್ತಾನವನ್ನು ‘ಹಿಂದೂ ಪಾಕಿಸ್ತಾನ’ವಾಗಿ ಪರಿವರ್ತಿಸಲಿದೆ ಎಂದು ತರೂರ್ ಅವರು ಸಾರ್ವಜನಿಕ ಹೇಳಿಕೆ ನೀಡಿದ್ದಾರೆ ಎಂದು ಚೌಧುರಿ ಮನವಿಯಲ್ಲಿ ಹೇಳಿದ್ದಾರೆ. ತನ್ನ ಹೇಳಿಕೆಗೆ ಕ್ಷಮೆ ಕೋರಲು ತರೂರು ನಿರಾಕರಿಸಿದ್ದಾರೆ ಎಂದು ಕೂಡ ಚೌಧುರಿ ಮನವಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News