5 ರೂ. ಬಿಸ್ಕಿಟ್ ಪ್ಯಾಕೆಟ್ ಖರೀದಿಸಲು ಜನ ಎರಡು ಬಾರಿ ಯೋಚಿಸುವ ಪರಿಸ್ಥಿತಿ ಬಂದಿದೆ: ಬ್ರಿಟಾನಿಯಾ ಎಂಡಿ ವರುಣ್ ಬೆರಿ

Update: 2019-08-13 15:08 GMT

ಮುಂಬೈ, ಆ.13: ದೇಶಾದ್ಯಂತ ಕಂಡು ಬರುತ್ತಿರುವ ಆರ್ಥಿಕ ಹಿಂಜರಿತ ಈಗ ಅಟೋಮೊಬೈಲ್ ಇತ್ಯಾದಿ ವಾಣಿಜ್ಯ ಕ್ಷೇತ್ರಗಳನ್ನು ದಾಟಿ ಆಹಾರ ಸಾಮಗ್ರಿಗಳ ರಂಗಕ್ಕೂ ತಲುಪಿದ ಬಗ್ಗೆ ವರದಿಯಾಗುತ್ತಿದೆ.

ದೇಶದ ಬೇಕರಿ ತಿಂಡಿತಿನಿಸು ಮಾರುಕಟ್ಟೆಯ ಮೂರನೇ ಒಂದರಷ್ಟು ಭಾಗದ ಮೇಲೆ ಹಿಡಿತ ಸಾಧಿಸಿರುವ ಖ್ಯಾತ ಕಂಪೆನಿ ಬ್ರಿಟಾನಿಯಾ ಲಿಮಿಟೆಡ್ ನ ಆಡಳಿತ ನಿರ್ದೇಶಕ ವರುಣ್ ಬೆರಿ ಅವರು “ನಾವು ಕೇವಲ 6% ಅಭಿವೃದ್ಧಿ ಸಾಧಿಸಿದ್ದೇವೆ, ಒಟ್ಟಾರೆ ಮಾರುಕಟ್ಟೆ ಅದಕ್ಕಿಂತಲೂ ನಿಧಾನ ಗತಿಯಲ್ಲಿದೆ. ಇದು ಚಿಂತೆಯ ವಿಷಯ. 5 ರೂಪಾಯಿಯ ಬಿಸ್ಕಿಟ್ ಪ್ಯಾಕೆಟ್ ಖರೀದಿಸಲು ಎರಡು ಬಾರಿ ಜನರು ಯೋಚಿಸುತ್ತಿದ್ದಾರೆ ಎಂದರೆ ಆರ್ಥಿಕತೆಯಲ್ಲಿ ಏನೋ ಗಂಭೀರ ಸಮಸ್ಯೆ ಇದೆ ಎಂದರ್ಥ" ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.

"ಜೊತೆಗೆ ರಿಯಲ್ ಎಸ್ಟೇಟ್, ಸ್ಟಾಕ್ ಮಾರ್ಕೆಟ್ ಅಥವಾ ಇನ್ನು ಯಾವುದೇ ಹೂಡಿಕೆ ಕ್ಷೇತ್ರ ನೋಡಿದರೂ ಅಲ್ಲಿ ಅಭಿವೃದ್ಧಿ ಇಳಿಮುಖವಾಗಿಯೇ ಕಂಡು ಬರುತ್ತಿದೆ. ಈ ಹೂಡಿಕೆ ಕ್ಷೇತ್ರಗಳಲ್ಲಿ ಮಾಡಿದ ಹೂಡಿಕೆಗೆ ಇದ್ದ ಬೆಲೆ ಸಾಕಷ್ಟು ಇಳಿದಿದೆ ಎಂದು ಗ್ರಾಹಕರು ಆತಂಕಕ್ಕೊಳಗಾಗಿದ್ದಾರೆ" ಎಂದು ವರುಣ್ ಬೆರಿ ಹೇಳಿದ್ದಾರೆ.

"ಈ ಹಿಂದೆ ಮಾರುಕಟ್ಟೆ 7% ಪ್ರಮಾಣದಲ್ಲಿ ಬೆಳೆಯುತ್ತಿದ್ದರೆ ನಾವು 10 -11% ಪ್ರಮಾಣದಲ್ಲಿ ಬೆಳೆಯುತ್ತಿದ್ದೆವು. ಆದರೆ ಈ ತ್ರೈಮಾಸಿಕದಲ್ಲಿ ಮಾರುಕಟ್ಟೆ ಬೆಳವಣಿಗೆ ತೀರಾ, ತೀರಾ ನಿಧಾನವಾಗಿದೆ. ನಾವು ಅದಕ್ಕಿಂತ ಬಹಳ ಮುಂದಿದ್ದೇವೆ. ಆದರೆ ನಮ್ಮ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ. ಇದು ಕಳವಳದ ವಿಷಯ. ಈ ಹಿಂಜರಿತ ಬೇಗ ಸರಿಯಾಗುವುದಿಲ್ಲ. ಮಾರುಕಟ್ಟೆ ವಾತಾವರಣ ಸರಿಯಾಗಿ ಹೂಡಿಕೆ ಕ್ಷೇತ್ರ ಚೇತರಿಕೆ ಕಂಡರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು. ಆದರೆ ಇದು ತಕ್ಷಣ ಸರಿಯಾಗುವ ಸಾಧ್ಯತೆ ಇಲ್ಲ" ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News