ಜಮ್ಮು ಕಾಶ್ಮೀರದಲ್ಲಿ ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ಧ: ಬಿಪಿನ್ ರಾವತ್

Update: 2019-08-13 15:12 GMT

ಹೊಸದಿಲ್ಲಿ, ಆ.13: ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಬಳಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸುತ್ತಿರುವುದು ಒಂದು ಸಾಮಾನ್ಯ ವಿಷಯವಾಗಿದ್ದು, ಇದಕ್ಕೆ ಗಾಬರಿಪಡಬೇಕಾದ   ಅಗತ್ಯವಿಲ್ಲ . ಅದಾಗ್ಯೂ, ಈ ಪ್ರದೇಶದಲ್ಲಿ ಎದುರಾಗುವ ಯಾವುದೇ ರೀತಿಯ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮಂಗಳವಾರ ತಿಳಿಸಿದ್ದಾರೆ.

ಎಲ್ಲ ದೇಶಗಳೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಪಾಕಿಸ್ತಾನ ನಿಯಂತ್ರಣ ರೇಖೆಯ ಬಳಿ ಹೆಚ್ಚುವರಿ ಸೇನೆಯನ್ನು ನಿಯೋಜಿಸುತ್ತಿರುವ ವಿಷಯದಲ್ಲಿ ಚಿಂತಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದ ನಂತರ ನಿಯಂತ್ರಣ ರೇಖೆಯ ಬಳಿ ನಡೆಯುತ್ತಿರುವ ಬೆಳವಣಿಗೆಯ ಕುರಿತು ಸೇನಾ ಮುಖ್ಯಸ್ಥರ ಗಮನ ಸೆಳೆದ ವೇಳೆ ಅವರು ಈ ರೀತಿ ಉತ್ತರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂದಿನ ದಿನಗಳಲ್ಲಿ ನಿಯಂತ್ರಣ ರೇಖೆಯ ಬಳಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಲಿದೆಯೇ ಎಂದು ಕೇಳಿದಾಗ, ಇದನ್ನು ನಿರ್ಧರಿಸಬೇಕಾಗಿರುವುದು ಪಾಕಿಸ್ತಾನ ಎಂದು ರಾವತ್ ಉತ್ತರಿಸಿದ್ದಾರೆ. ಕೇಂದ್ರ ಸರಕಾರದ ನಿರ್ಧಾರದಿಂದ ಉಂಟಾಗಬಹುದಾದ ನಾಗರಿಕ ಸಂಘರ್ಷಗಳನ್ನು ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಸೇನಾ ಕಮಾಂಡರ್‌ಗಳು ನಿಗಾಯಿಸಿರಿಸಿದ್ದಾರೆ ಎಂದು ರಾವತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News