ಟ್ರಂಪ್‌ರಿಂದ ಕಾಶ್ಮೀರ ವಿಷಯದಲ್ಲಿ ಇನ್ನು ಮಧ್ಯಸ್ಥಿಕೆ ಕೊಡುಗೆ ಇಲ್ಲ: ಅಮೆರಿಕಕ್ಕೆ ಭಾರತದ ರಾಯಭಾರಿ

Update: 2019-08-13 16:02 GMT

ವಾಶಿಂಗ್ಟನ್, ಆ. 13: ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಕೊಡುಗೆಯನ್ನು ನಾನು ಇನ್ನೆಂದೂ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ ಎಂದು ಅಮೆರಿಕಕ್ಕೆ ಭಾರತದ ರಾಯಭಾರಿ ಹರ್ಷ ವರ್ಧನ್ ಶ್ರಿಂಗ್ಲಾ ಸೋಮವಾರ ಹೇಳಿದ್ದಾರೆ.

ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆಯಿಲ್ಲ, ಆದರೆ ಭಿನ್ನಾಭಿಪ್ರಾಯಗಳನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನಗಳಿಗೆ ನೆರವು ನೀಡುವುದು ಅಮೆರಿಕದ ದಶಕಗಳ ಹಳೆಯ ನೀತಿಯಾಗಿದೆ ಎಂದು ಅವರು ನುಡಿದರು.

 ‘‘ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ನನ್ನ ಕೊಡುಗೆ ಭಾರತ ಮತ್ತು ಪಾಕಿಸ್ತಾನಗಳು ಒಪ್ಪಿದರೆ ಮಾತ್ರ ಎಂದು ಅಧ್ಯಕ್ಷ ಟ್ರಂಪ್ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಮಧ್ಯಸ್ಥಿಕೆಯ ಕೊಡುಗೆಯನ್ನು ಭಾರತ ಸ್ವೀಕರಿಸಿಲ್ಲವಾದುದರಿಂದ, ಈ ಪ್ರಸ್ತಾಪ ಇನ್ನು ಮುಂದೆ ತನ್ನ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ’’ ಎಂದು ಅಮೆರಿಕ ಅಧ್ಯಕ್ಷರ ನೆಚ್ಚಿನ ಸುದ್ದಿ ಚಾನೆಲ್ ‘ಫಾಕ್ಸ್ ನ್ಯೂಸ್’ಗೆ ನೀಡಿದ ಹೇಳಿಕೆಯೊಂದರಲ್ಲಿ ಶ್ರಿಂಗ್ಲಾ ತಿಳಿಸಿದರು.

 ಕಾಶ್ಮೀರ ವಿಷಯದಲ್ಲಿ ನಾನು ಮಧ್ಯಸ್ಥಿಕೆ ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ ಎಂದು ಜಲೈ 22ರಂದು ಶ್ವೇತಭವನದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಳೆ ಟ್ರಂಪ್ ಹೇಳಿದ್ದರು.

 ನರೇಂದ್ರ ಮೋದಿ ಇಂಥ ಯಾವುದೇ ಮನವಿಯನ್ನು ಟ್ರಂಪ್‌ಗೆ ಮಾಡಿಲ್ಲ ಎಂದು ಭಾರತ ಬಳಿಕ ಸ್ಪಷ್ಟಪಡಿಸಿದೆ ಹಾಗೂ ಎಲ್ಲ ವಿವಾದಗಳನ್ನು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News