ಕ್ಷಿಪಣಿ ಸ್ಫೋಟದ ಬಳಿಕ ವಿಕಿರಣ ಮಟ್ಟದಲ್ಲಿ ಅಗಾಧ ಹೆಚ್ಚಳ: ರಶ್ಯ

Update: 2019-08-13 16:16 GMT

ಮಾಸ್ಕೋ (ರಶ್ಯ), ಆ. 13: ರಶ್ಯದ ಬಿಳಿ ಸಮುದ್ರದಲ್ಲಿ ಆಗಸ್ಟ್ 8ರಂದು ನಡೆದ ವಿಫಲ ಕ್ಷಿಪಣಿ ಪರೀಕ್ಷೆಯ ಬಳಿಕ, ಆ ಸ್ಥಳದ ಸಮೀಪದಲ್ಲಿನ ವಿಕಿರಣ ಮಟ್ಟ ಸಾಮಾನ್ಯಕ್ಕಿಂತ 16 ಪಟ್ಟು ಹೆಚ್ಚಿತ್ತು ಎಂದು ಸರಕಾರಿ ಹವಾಮಾನ ಇಲಾಖೆ ತಿಳಿಸಿದೆ.

  ಸೆವರೊಡ್‌ವಿನ್‌ಸ್ಕ್‌ನಲ್ಲಿರುವ 8 ಪರೀಕ್ಷಾ ಕೇಂದ್ರಗಳ ಪೈಕಿ 6ರಲ್ಲಿ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಅಳೆಯಲಾದ ಗಾಮಾ ವಿಕಿರಣದ ಮಟ್ಟ ಈ ಬಂದರು ನಗರದ ಸಾಮಾನ್ಯ ದರವಾದ ಗಂಟೆಗೆ 0.11 ಮೈಕ್ರೋಸೀವರ್ಟ್ಸ್‌ಗಿಂತ 4ರಿಂದ 16 ಪಟ್ಟು ಹೆಚ್ಚಾಗಿತ್ತು ಎಂದು ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಒಂದು ಕೇಂದ್ರದಲ್ಲಿನ ವಿಕಿರಣ ಮಟ್ಟವು ಗಂಟೆಗೆ 1.78 ಮೈಕ್ರೋಸೀವರ್ಟ್ಸ್ ಆಗಿತ್ತು.

ಆರು ಕೇಂದ್ರಗಳಲ್ಲಿ ಅರ್ಧ ಗಂಟೆಯ ಬಳಿಕ ವಿಕಿರಣ ಮಟ್ಟ ಗಣನೀಯವಾಗಿ ಕುಸಿಯಿತು ಹಾಗೂ ಮಧ್ಯಾಹ್ನ 2:30ರ ವೇಳೆಗೆ ಅದು ಸಾಮಾನ್ಯ ಮಟ್ಟಕ್ಕೆ ನಿಕಟವಾಗಿತ್ತು ಎಂದು ಅದು ಹೇಳಿದೆ.

ಕ್ಷಿಪಣಿ ಇಂಜಿನೊಂದರ ಪರೀಕ್ಷೆಯ ವೇಳೆ ನಡೆದ ಸ್ಫೋಟದಲ್ಲಿ ಐವರು ಪರಮಾಣು ವಿಜ್ಞಾನಿಗಳು ಮೃತಪಟ್ಟಿದ್ದಾರೆ. ಆರ್ಕ್‌ಟಿಕ್ ವೃತ್ತದ ಸಮೀಪದ ಅರ್ಖಾಂಜೆಲ್‌ಸ್ಕ್ ವಲಯದ ಸಮುದ್ರದಲ್ಲಿ ನಡೆದ ಕ್ಷಿಪಣಿ ಪರೀಕ್ಷೆಯಲ್ಲಿ ಐಸೋಟೋಪ್ ಶಕ್ತಿ ಮೂಲಗಳನ್ನು ಬಳಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News