ಜೇಟ್ಲಿಗೆ ತೀವ್ರನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರಿಕೆ

Update: 2019-08-13 18:17 GMT

ಹೊಸದಿಲ್ಲಿ, ಆ.13: ಎಐಐಎಂಎಸ್‌ಗೆ ಆಗಸ್ಟ್ 9ರಂದು ದಾಖಲಾಗಿರುವ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿಗೆ ಇನ್ನೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದು, ಅವರ ಆರೋಗ್ಯಸ್ಥಿತಿ ಗಂಭೀರವಾಗಿದ್ದರೂ ಹೃದಯ ಬಡಿತ ಮತ್ತು ರಕ್ತಸಂಚಾರ ಸಹಜವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಉಸಿರಾಟದ ಸಮಸ್ಯೆ ಹಾಗೂ ನಿತ್ರಾಣದ ಸಮಸ್ಯೆಯಿಂದ ಬಳಲುತ್ತಿದ್ದ ಜೇಟ್ಲಿಯವರನ್ನು ಆಗಸ್ಟ್ 9ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದಂದಿನಿಂದ ಜೇಟ್ಲಿಯವರ ಆರೋಗ್ಯಸ್ಥಿತಿ ಬಗ್ಗೆ ಎಐಐಎಂಎಸ್ ಯಾವುದೇ ಬುಲೆಟಿನ್ ಹೊರಡಿಸಿಲ್ಲ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಿತ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯಸ್ಥಿತಿ ವಿಚಾರಿಸಿದ್ದರು. ಶನಿವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ನೀಡಿ ತೆರಳಿದ ಬಳಿಕ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯವರು, ಜೇಟ್ಲಿಯವರ ಆರೋಗ್ಯಸ್ಥಿತಿ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News