ಬೆಳ್ತಂಗಡಿ ತಾಲೂಕಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು: ಅಭಯಚಂದ್ರ ಜೈನ್

Update: 2019-08-14 08:59 GMT

ಮಂಗಳೂರು, ಆ.14: ಮಳೆಯಿಂದಾಗಿ ದ.ಕ. ಜಿಲ್ಲೆಯ ಬೆಳ್ತಂಗಡಿ ಈ ಬಾರಿ ಭಾರೀ ಅನಾಹುತಕ್ಕೆ ತುತ್ತಾಗಿದ್ದು, ಕೊಡಗು ಮಾದರಿಯಲ್ಲಿ ಈ ಬಾರಿ ತಾಲೂಕಿಗೆ ವಿಶೇಷ ಪ್ಯಾಕೇಜನ್ನು ರಾಜ್ಯ ಸರಕಾರ ಘೋಷಿಸಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಒತ್ತಾಯ ಮಾಡಿದ ಅವರು, ಕಳೆದ ಬಾರಿ ಮಡಿಕೇರಿಯಲ್ಲಿ ಸಂಭವಿಸಿದ ಮಳೆಹಾನಿಗಿಂದಲೂ ದುಪ್ಪಟ್ಟ ಹಾನಿ ಬೆಳ್ತಂಗಡಿ ತಾಲೂಕೊಂದರಲ್ಲೇ ಸಂಭವಿಸಿದೆ. ಹಾಗಾಗಿ ಮಳೆಹಾನಿಗೆ ಸಂಬಂಧಿಸಿ ಕಳೆದ ಬಾರಿ ಸರಕಾರ ಕೈಗೊಂಡ ಕೊಡಗು ವಿಶೇಷ ಪ್ಯಾಕೇಜ್ ಮಾದರಿಯಲ್ಲಿ ಬೆಳ್ತಂಗಡಿ ತಾಲೂಕಿಗೂ ಮಾಡಬೇಕು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಮಂತ್ರಿ ಮಂಡಲದ ಹೊರತಾಗಿಯೂ ರಾಜ್ಯದಾದ್ಯಂತ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಇದನ್ನು ತಾವು ಸ್ವಾಗತಿಸುವುದಾಗಿ ಅವರು ಹೇಳಿದರು.

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಅಪಾರ ಹಾನಿಯಾಗಿದೆ. ಪಶ್ಚಿಮ ಘಟ್ಟ ಕೊರೆದುಕೊಂಡು ಮರಳು ನದಿಗಳಿಗೆ ಸೇರಿ ಸೇತುವೆ, ಕಿಂಡಿ ಅಣೆಕಟ್ಟುಗಳು ಕೊಚ್ಚಿ ಹೋಗಿವೆ. ಪಶ್ಚಿಮ ಘಟ್ಟದ ತಪ್ಪಿಲಿನ ಜನ ಕೃಷಿಯನ್ನೇ ಅವಲಂಬಿಸಿರುವವರು. ಸುಮಾರು 500 ಮನೆಗಳಿಗೆ ಹಾನಿಯಾಗಿದ್ದು, 300 ಮನೆಗಳು ಪೂರ್ತಿಯಾಗಿ ಹಾನಿಯಾಗಿವೆ. ಮೂರು ಸೇತುವೆಗಳು ನಾಶವಾಗಿವೆ. ಇದರ ಜತೆ ಕಿರು ಸೇತುವೆಗಳು, ಕಿಂಡಿ ಅಣೆಕಟ್ಟುಗಳು ಕೂಡಾ ಕೊಚ್ಚಿ ಹೋಗಿವೆ. 100 ಎಕರೆ ಬೆಳೆ ನಾಶವಾಗಿದೆ. ಕೃಷಿ ಭೂಮಿಗೆ ಮರಳು ಮಣ್ಣು ಸೇರಿದೆ. ಅವರು ಮತ್ತೆ ಬದುಕು ಕಟ್ಟಿಕೊಳ್ಳಲು ಐದು ವರ್ಷಗಳೇ ಬೇಕಾದೀತು. ಹಾಗಾಗಿ ಅವರಿಗೆ ಸಮರ್ಪಕವಾಗಿ ಸ್ಪಂದಿಸುವ ಕೆಲಸ ಆಗಬೇಕು. ಜನಪ್ರತಿನಿಧಿಗಳು ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಜಿ.ಪಂ.ನಿಂದ ಕೆಲಸ ಆಗಬೇಕು. ಪಿಡಿಒ ಹಾಗೂ ವಿಎಗಳು ಹೃದಯ ವೈಶಾಲ್ಯತೆಯಿಂದ ಕಾರ್ಯ ನಿರ್ವಹಿಸಬೇಕು. ಮನೆಗಳಿಗೆ ಭಾಗಶ: ಹಾನಿ ಎಂದು ಹೇಳಿ ಹೊಸ ಮನೆಗೆ ಅವಕಾಶ ನೀಡದಿರಬಾರದು. ಪುನರ್ವಸತಿ ಸಮರ್ಪಕವಾಗಿ ನಡೆಯಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ, ಹರೀಶ್ ಕುಮಾರ್, ಮಾಜಿ ಸಚಿವ ಯು.ಟಿ.ಖಾದರ್, ವಸಂತ ಬಂಗೇರ ಸೇರಿದಂತೆ ನಾವೆಲ್ಲಾ ನೆರೆ ಪೀಡಿತ ಪ್ರದೇಶಗಳಿಗೆ ಸಂಚರಿಸಿ ನಿರಾಶ್ರಿತರನ್ನು ಭೇಟಿ ಮಾಡಿದ್ದೇವೆ. ಈಗಾಗಲೇ ಮಾಜಿ ಸಚಿವ ಯು.ಟಿ.ಖಾದರ್‌ರವರು ಮುಖ್ಯಮಂತ್ರಿ ಭೇಟಿ ಸಂದರ್ಭ ವಿಶೇಷ ಪ್ಯಾಕೇಜ್‌ಗಾಗಿ ಮನವಿಯನ್ನು ಸಲ್ಲಿಸಿದ್ದಾರೆ. ಪಕ್ಷದ ನಿಯೋಗವೊಂದು ಬೆಂಗಳೂರಿಗೆ ತೆರಳಿ ಮತ್ತೆ ಮನವಿ ಮಾಡಲಿದ್ದೇವೆ ಎಂದವರು ಹೇಳಿದರು.

ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೆಪಿಸಿಸಿ ವತಿಯಿಂದ ಚಿಂತನೆ ನಡೆದಿದೆ. ವೈಯಕ್ತಿಕವಾಗಿ ನಾವೆಲ್ಲಾ ನೆರವು ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ವಿಶ್ವಾಸ್ ಕುಮಾರ್ ದಾಸ್, ರಘುರಾಜ್ ಕದ್ರಿ, ಪ್ರೇಮ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News