ಪೆಹ್ಲೂ ಖಾನ್ ಹತ್ಯೆ ಪ್ರಕರಣ: ಎಲ್ಲಾ 6 ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Update: 2019-08-14 16:03 GMT

ಜೈಪುರ, ಆ.14: ಜಾನುವಾರು ವ್ಯಾಪಾರಿ ಪೆಹ್ಲೂ ಖಾನ್ ಅವರನ್ನು ಗುಂಪುಥಳಿಸಿ ಹತ್ಯೆ ಮಾಡಿದ ಪ್ರಕರಣದ ಆರು ಆರೋಪಿಗಳನ್ನು ರಾಜಸ್ಥಾನ ನ್ಯಾಯಾಲಯ ಸಂಶಯದ ಲಾಭದ ಆಧಾರದಲ್ಲಿ ನಿರ್ದೋಷಿಗಳೆಂದು ಘೋಷಿಸಿ ಬಿಡುಗಡೆ ಮಾಡಿದೆ. 2017ರ ಎಪ್ರಿಲ್ 1ರಂದು ಜಾತ್ರೆಯಲ್ಲಿ ಖರೀದಿಸಿದ್ದ ಜಾನುವಾರುಗಳನ್ನು ಟ್ರಕ್‌ನಲ್ಲಿ ಸಾಗಿಸುತ್ತಿದ್ದ ಪೆಹ್ಲೂ ಖಾನ್ ಅವರನ್ನು ಜೈಪುರ-ದಿಲ್ಲಿ ಹೆದ್ದಾರಿಯಲ್ಲಿ ಅಡ್ಡಗಟ್ಟಿದ ಗೋರಕ್ಷಕ ಗುಂಪು ಖಾನ್‌ರನ್ನು ವಾಹನದಿಂದ ಹೊರಗೆಳೆದು ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ಅವರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಎಲ್ಲ ಆರು ಆರೋಪಿಗಳು ಪೆಹ್ಲೂ ಖಾನ್ ಅವರನ್ನು ಥಳಿಸುತ್ತಿರುವ ದೃಶ್ಯ ಮೊಬೈಲ್ ಫೋನ್ ಮೂಲಕ ಚಿತ್ರೀಕರಿಸಲಾಗಿದ್ದ ವೀಡಿಯೊದಲ್ಲಿ ದಾಖಲಾಗಿತ್ತು. ಆದರೆ ಬಂಧಿತ ಆರೋಪಿಗಳು ಈ ವೇಳೆ ಸ್ಥಳದಲ್ಲಿದ್ದರು ಎನ್ನುವುದು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬರುವುದಿಲ್ಲ ಎಂದು ಅಲ್ವಾರ್‌ನ ನ್ಯಾಯಾಲಯ ತಿಳಿಸಿದೆ.

ಖಾನ್ ಅವರಿಗೆ ಥಳಿಸುತ್ತಿರುವ ವೀಡಿಯೊ ವೈರಲ್ ಆದ ನಂತರ ಪೊಲೀಸರು ಈ ದೃಶ್ಯಾವಳಿಯಲ್ಲಿ ಕಂಡುಬರುವ ವ್ಯಕ್ತಿಗಳನ್ನು ಗುರುತಿಸಿ ಬಂಧಿಸಿದ್ದರು. ಆದರೆ ತಾನು ಪೊಲೀಸರಿಗೆ ನೀಡಿದ ಪ್ರಾಥಮಿಕ ಹೇಳಿಕೆಯಲ್ಲಿ ಪೆಹ್ಲೂ ಖಾನ್ ದಾಳಿಕೋರರ ಹೆಸರನ್ನು ತಿಳಿಸಿರಲಿಲ್ಲ ಎನ್ನುವುದು ಸಂಶಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆರೋಪಿಗಳ ಪರ ವಕೀಲ ಹುಕಮ್ ಚಂದ್ ಶರ್ಮಾ ತಿಳಿಸಿದ್ದಾರೆ. ಪೆಹ್ಲೂ ಖಾನ್ ಸಾವನ್ನಪ್ಪಿರುವ ಕಾರಣದ ಬಗ್ಗೆ ಇರುವ ವರದಿಗಳೂ ಗೊಂದಲಮಯವಾಗಿವೆ. ಅವರ ಮರಣೋತ್ತರ ಪರೀಕ್ಷಾ ವರದಿ ಖಾನ್ ಥಳಿತದ ಗಾಯದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರೆ ಸರಕಾರಿ ಆಸ್ಪತ್ರೆಯ ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಸಾಯುವ ಸಂದರ್ಭದಲ್ಲಿ ಪೆಹ್ಲೂ ಖಾನ್ ಹೆಸರಿಸಿದ್ದ ಆರು ವ್ಯಕ್ತಿಗಳಿಗೆ ಪೊಲೀಸರು 2017ರಲ್ಲೇ ಕ್ಲೀನ್ ಚಿಟ್ ನೀಡಿದ್ದಾರೆ. ಈ ಪ್ರಕರಣದಲ್ಲಿ ಥಳಿತದ ವೀಡಿಯೊ ಚಿತ್ರೀಕರಿಸಿದ್ದ ವ್ಯಕ್ತಿಯ ವಿಚಾರಣೆಯನ್ನೇ ನಡೆಸಲಾಗಿಲ್ಲ ಮತ್ತೊಂದೆಡೆ, ವೀಡಿಯೊ ಚಿತ್ರೀಕರಿಸಿದ್ದ ಇನ್ನೋರ್ವ ವ್ಯಕ್ತಿ ವಿರುದ್ಧ ಹೇಳಿಕೆ ನೀಡಿದ್ದಾನೆ. ಪೆಹ್ಲೂ ಖಾನ್ ಅವರ ಮೇಲೆ ಹಲ್ಲೆ ನಡೆಸಿದ ಒಂಬತ್ತು ಮಂದಿಯ ಪೈಕಿ ಮೂವರು ಅಪ್ರಾಪ್ತ ವಯಸ್ಕರಾಗಿದ್ದು ಅವರು ಈಗಾಗಲೇ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದು ಮೊದಲನೆಯದ್ದು, ಖಾನ್ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧವಾಗಿದ್ದರೆ ಇನ್ನೊಂದು, ಅನುಮತಿ ಪಡೆಯದೆ ರಾಜಸ್ಥಾನದಿಂದ ಇನ್ನೊಂದು ರಾಜ್ಯಕ್ಕೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂಬ ಆರೋಪದಲ್ಲಿ ಪೆಹ್ಲೂ ಖಾನ್ ಮತ್ತವರ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News