×
Ad

ಲಾಹೋರ್ ನಲ್ಲಿ ರಣಜಿತ್ ಸಿಂಗ್ ಪ್ರತಿಮೆಯನ್ನು ಭಗ್ನಗೊಳಿಸಿರುವುದು ಆಘಾತಕಾರಿ: ಪಂಜಾಬ್ ಸಿಎಂ

Update: 2019-08-14 19:52 IST

ಹೊಸದಿಲ್ಲಿ, ಆ.14: ಲಾಹೋರಿನಲ್ಲಿ ಸಿಖ್ ದೊರೆ ರಣಜಿತ್ ಸಿಂಗ್ ಅವರ ಪ್ರತಿಮೆಯನ್ನು ಭಗ್ನಗೊಳಿಸಿರುವ ಕೃತ್ಯವನ್ನು ಬುಧವಾರ ಖಂಡಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪಾಕಿಸ್ತಾನ ಸರಕಾರವನ್ನು ಆಗ್ರಹಿಸಿದ್ದಾರೆ.

‘ಲಾಹೋರಿನ ಶಾಹಿ ಕಿಲಾದಲ್ಲಿ ಮಹಾರಾಜಾ ರಣಜಿತ್ ಸಿಂಗ್ ಅವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು ಆಘಾತಕಾರಿಯಾಗಿದೆ. ಇದು ಅತ್ಯಂತ ಖಂಡನೀಯವಾಗಿದೆ ’ಎಂದೂ ಸಿಂಗ್ ಟ್ವೀಟಿಸಿದ್ದಾರೆ.

ಶನಿವಾರ ಸಂದರ್ಶಕರ ಭೇಟಿಗಾಗಿ ಶಾಹಿ ಕಿಲಾ ತೆರೆದಿದ್ದಾಗ ಓರ್ವ ವ್ಯಕ್ತಿ ಅಂಗವಿಕಲನ ಸೋಗಿನಲ್ಲಿ ಕೈಯಲ್ಲೊಂದು ಬಡಿಗೆ ಹಿಡಿದುಕೊಂಡು ಪ್ರವೇಶಿದ್ದು,ಇನ್ನೋರ್ವ ವ್ಯಕ್ತಿ ಆತನ ಸಹಾಯಕನಂತೆ ನಟಿಸಿದ್ದ. ಇಬ್ಬರೂ ನೇರವಾಗಿ ಪ್ರತಿಮೆಯ ಬಳಿ ತೆರಳಿ ದಾಳಿ ಆರಂಭಿಸಿದ್ದರು. ಜೂನ್‌ನಲ್ಲಷ್ಟೇ ಅನಾವರಣಗೊಂಡಿದ್ದ ಪ್ರತಿಮೆ ಈ ದಾಳಿಯಿಂದ ಭಗ್ನಗೊಂಡಿದೆ.

ಭದ್ರತಾ ಸಿಬ್ಬಂದಿಗಳು ದುಷ್ಕರ್ಮಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ತಾವು ಘಝ್ನಿ ಮೆಹಮೂದ್‌ನ ಪುನರಾವತಾರಗಳೆಂದು ಹೇಳಿಕೊಂಡಿರುವ ಆರೋಪಿಗಳು ಧಾರ್ಮಿಕ ದ್ವೇಷದಿಂದ ಈ ಕೃತ್ಯವನ್ನೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News