16ನೇ ಶತಮಾನದ ಪುಸ್ತಕದಲ್ಲಿ ಶ್ರೀರಾಮನ ಜನ್ಮಭೂಮಿ ಉಲ್ಲೇಖಗೊಂಡಿದೆ: ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡನೆ

Update: 2019-08-14 16:02 GMT

ಹೊಸದಿಲ್ಲಿ, ಆ.14: ಹಿಂದು ಪುರಾಣಗಳು ಹೇಳುವಂತೆ ಅಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಾಗಿದೆ ಮತ್ತು ಆತ ವಿವಾದಿತ ಕಟ್ಟಡದ ನಿವೇಶನದಲ್ಲಿ ಜನ್ಮವೆತ್ತಿದ್ದ ಎನ್ನುವುದು ಹಿಂದುಗಳ ನಂಬಿಕೆ ಹಾಗೂ ವಿಶ್ವಾಸವಾಗಿದೆ ಮತ್ತು ಅದರ ತಾರ್ಕಿಕತೆಯನ್ನು ನೋಡಲು ನ್ಯಾಯಾಲಯವು ಎಲ್ಲೆಯನ್ನು ದಾಟಬಾರದು ಎಂದು ‘ರಾಮ ಲಲ್ಲಾ ವಿರಾಜಮಾನ್’ ಪರ ಹಿರಿಯ ವಕೀಲ ಸಿ.ಎಸ್ ವೈದ್ಯನಾಥನ್ ಅವರು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ತಿಳಿಸಿದರು.

ವಿಚಾರಣೆಯ ಆರನೇ ದಿನ ತನ್ನ ವಾದವನ್ನು ಮುಂದುವರಿಸಿದ ವೈದ್ಯನಾಥನ್, 1608-1611ರ ನಡುವೆ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟಿಷ್ ವ್ಯಾಪಾರಿ ವಿಲಿಯಂ ಫ್ಲಿಂಚ್ ಬರೆದಿರುವ ‘ಅರ್ಲಿ ಟ್ರಾವೆಲ್ಸ್ ಟು ಇಂಡಿಯಾ’ ಪ್ರವಾಸ ಕಥನವನ್ನು ಪ್ರಸ್ತಾಪಿಸಿ,ಅಯೋಧ್ಯೆಯಲ್ಲಿ ಕೋಟೆಯೊಂದಿದ್ದು,ಅಲ್ಲಿ ಶ್ರೀರಾಮನ ಜನ್ಮವಾಗಿತ್ತು ಎಂದು ಹಿಂದುಗಳು ನಂಬಿದ್ದಾರೆ ಎಂದು ಆತ ದಾಖಲಿಸಿದ್ದಾನೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದರು.

ಶ್ರೀರಾಮ ಅಲ್ಲಿಯೇ ಜನಿಸಿದ್ದ ಎನ್ನುವುದು ಜನರ ನಂಬಿಕೆಯಾಗಿದೆ ಮತ್ತು ಅದು ಸದಾ ರಾಮ ಜನ್ಮಸ್ಥಾನ ಎಂದು ಪರಿಗಣಿಸಲ್ಪಡುತ್ತದೆ ಎಂದರು.

ಆಯೋಧ್ಯೆಯು ರಾಮ ಜನ್ಮಸ್ಥಳವಾಗಿತ್ತು ಎಂಬ ಜನರ ನಂಬಿಕೆಯ ಕುರಿತು ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ಬ್ರಿಟಿಷ್ ಸರ್ವೆಯರ್ ಮಾಂಟೆಗೊಮರಿ ಮಾರ್ಟಿನ್ ಮತ್ತು ಜೆಸ್ಯೂಟ್ ಮಿಷನರಿ ಜೊಸೆಫ್ ಟೈಫೆಂಥಲರ್ ಸೇರಿದಂತೆ ಇತರರ ಪ್ರವಾಸ ಕಥನಗಳನ್ನೂ ಅವರು ಪ್ರಸ್ತಾಪಿಸಿದರು.

ಅದನ್ನು ಮೊದಲ ಬಾರಿಗೆ ಬಾಬರಿ ಮಸೀದಿ ಎಂದು ಯಾವಾಗ ಕರೆಯಲಾಗಿತ್ತು ಎಂಬ ಪೀಠದ ಪ್ರಶ್ನೆಗೆ ವೈದ್ಯನಾಥನ್,19ನೇ ಶತಮಾನದಲ್ಲಿ. ಅದಕ್ಕೂ ಮೊದಲು ಅದು ಬಾಬರಿ ಮಸೀದಿ ಎಂದು ಕರೆಯಲ್ಪಡುತ್ತಿತ್ತು ಎಂದು ತೋರಿಸುವ ಯಾವುದೇ ದಾಖಲೆಗಳಿಲ್ಲ ಎಂದು ಉತ್ತರಿಸಿದರು.

ಪೀಠದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು,ಬಾಬರ್‌ನಾಮಾದಲ್ಲಿ ಅಯೋಧ್ಯೆಗೆ ಬಾಬರ್ ಭೇಟಿಯ ಕುರಿತು ಏನನ್ನೂ ಹೇಳಲಾಗಿಲ್ಲ ಎಂದು ಹೇಳಿದಾಗ,ಮಂದಿರವನ್ನು ಧ್ವಂಸಗೊಳಿಸಲು ಬಾಬರ್ ಆದೇಶಿಸಿದ್ದ ಎನ್ನುವುದಕ್ಕೆ ವಸ್ತುನಿಷ್ಠ ಸಾಕ್ಷಾಧಾರವೇನು ಎಂದು ಪೀಠವು ಪ್ರಶ್ನಿಸಿತು. ಇದಕ್ಕೆ,ಬಾಬರ್ ಕಟ್ಟಡವನ್ನು ಧ್ವಂಸಗೊಳಿಸುವಂತೆ ತನ್ನ ಸೇನಾಪತಿಗೆ ಸೂಚಿಸಿದ್ದ ಎಂದು ವೈದ್ಯನಾಥನ್ ಉತ್ತರಿಸಿದರು.

 ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಕಕ್ಷಿದಾರರ ಪರ ಹಿರಿಯ ವಕೀಲ ರಾಜೀವ್ ಧವನ್ ಅವರು,ಬಾಬರ್ ಸರಯೂ ನದಿಯನ್ನು ದಾಟಿದ್ದ ಎನ್ನುವುದನ್ನು ಬಾಬರ್‌ನಾಮಾದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅದರ ಕೆಲವು ಪುಟಗಳು ನಾಪತ್ತೆಯಾಗಿವೆ ಎಂದು ತಿಳಿಸಿದರು.

ಕಟ್ಟಡವನ್ನು ಬಾಬರ್ ಧ್ವಂಸಗೊಳಿಸಿದ್ದ ಮತ್ತು ಅದನ್ನು ಔರಂಗಝೇಬ್ ಧ್ವಂಸಗೊಳಿಸಿದ್ದ ಎಂಬ ಎರಡು ಹೇಳಿಕೆಗಳಿವೆ ಎಂದು ತಿಳಿಸಿದ ವೈದ್ಯನಾಥನ್,ಆದರೆ ಮಸೀದಿಯಲ್ಲಿನ ಕೆತ್ತನೆಯ ಬರಹವು ವಿವಾದಿತ ಸ್ಥಳದಲ್ಲಿ ಮೂರು ಗುಮ್ಮಟಗಳ ಕಟ್ಟಡವನ್ನು ಬಾಬರ್ ನಿರ್ಮಿಸಿದ್ದ ಎನ್ನುವುದನ್ನು ಸೂಚಿಸುತ್ತದೆ ಎಂದರು.

ವಿವಾದಿತ ಸ್ಥಳದಲ್ಲಿ ಮೊದಲು ಮಂದಿರವಿತ್ತು ಎನ್ನುವುದು ಸ್ಪಷ್ಟವಾಗಿದೆ ಎಂದು ಅವರು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News