ಭಾರತ ಅಭಿವೃದ್ಧಿಶೀಲ ದೇಶವಲ್ಲ, ಅದು ಡಬ್ಲ್ಯುಟಿಒದ ಲಾಭಗಳನ್ನೆತ್ತಲು ಬಿಡುವುದಿಲ್ಲ: ಟ್ರಂಪ್

Update: 2019-08-14 16:28 GMT

ವಾಶಿಂಗ್ಟನ್, ಆ. 14: ಭಾರತ ಮತ್ತು ಚೀನಾಗಳು ಈಗ ‘ಅಭಿವೃದ್ಧಿಶೀಲ ದೇಶ’ಗಳಲ್ಲ, ಆದರೆ ಅವುಗಳು ಈ ಹಣೆಪಟ್ಟಿಯ ಮೂಲಕ ಡಬ್ಲ್ಯುಟಿಒದಿಂದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಹಾಗೂ ಇದು ಮುಂದುವರಿಯಲು ನಾನು ಬಿಡುವುದಿಲ್ಲ ಎಂದಿದ್ದಾರೆ.

‘ಅಮೆರಿಕ ಮೊದಲು’ ನೀತಿಯನ್ನು ಪ್ರತಿಪಾದಿಸುತ್ತಿರುವ ಟ್ರಂಪ್, ಅಮೆರಿಕದ ಉತ್ಪನ್ನಗಳ ಮೇಲೆ ‘‘ಭಾರೀ ಪ್ರಮಾಣದ ತೆರಿಗೆಗಳನ್ನು ಹೇರುತ್ತಿರುವುದಕ್ಕಾಗಿ’’ ಭಾರತವನ್ನು ಟೀಕಿಸುತ್ತಿದ್ದಾರೆ ಹಾಗೂ ಈ ಕಾರಣಕ್ಕಾಗಿ ಅವರು ಭಾರತವನ್ನು ‘ತೆರಿಗೆಗಳ ರಾಜ’ ಎಂದು ಬಣ್ಣಿಸಿದ್ದಾರೆ.

ಅಮೆರಿಕ ಮತ್ತು ಚೀನಾಗಳು ಈಗ ತೀವ್ರ ವ್ಯಾಪಾರ ಸಮರದಲ್ಲಿ ತೊಡಗಿವೆ. ಚೀನಾದ ರಫ್ತು ಉತ್ಪನ್ನಗಳ ಮೇಲೆ ಟ್ರಂಪ್ ದಂಡನಾ ತೆರಿಗೆಗಳನ್ನು ವಿಧಿಸಿದ್ದಾರೆ ಹಾಗೂ ಚೀನಾ ಕೂಡ ಇದಕ್ಕೆ ಪ್ರತೀಕಾರಾತ್ಮಕ ತೆರಿಗೆಗಳನ್ನು ವಿಧಿಸಿದೆ.

ಅಭಿವೃದ್ಧಿಶೀಲ ಸ್ಥಾನಮಾನವನ್ನು ನೀವು ಯಾವ ಆಧಾರದಲ್ಲಿ ನೀಡುತ್ತೀರಿ ಎಂದು ಟ್ರಂಪ್ ಜುಲೈ ತಿಂಗಳ ಆದಿ ಭಾಗದಲ್ಲಿ ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ)ಯನ್ನು ಪ್ರಶ್ನಿಸಿದ್ದರು. ಆ ಮೂಲಕ, ಅವರು ಭಾರತ, ಚೀನಾ ಮತ್ತು ಟರ್ಕಿ ಮುಂತಾದ ದೇಶಗಳನ್ನು ಗುರಿಯಾಗಿಸಿದ್ದರು. ಈ ದೇಶಗಳು ಜಾಗತಿಕ ವ್ಯಾಪಾರ ನಿಯಮಗಳಲ್ಲಿ ಹಲವಾರು ವಿನಾಯಿತಿಗಳನ್ನು ಪಡೆದುಕೊಂಡಿವೆ.

‘‘ಏಶ್ಯದ ಎರಡು ಆರ್ಥಿಕ ಬಲಾಢ್ಯ ದೇಶಗಳಾದ ಭಾರತ ಮತ್ತು ಚೀನಾ ಈಗ ಅಭಿವೃದ್ಧಿಶೀಲ ದೇಶಗಳಲ್ಲ, ಹಾಗಾಗಿ ಅವುಗಳು ಡಬ್ಲುಟಿಒದಿಂದ ಪ್ರಯೋಜನಗಳನ್ನು ಪಡೆದುಕೊಳ್ಳುವಂತಿಲ್ಲ’’ ಎಂದು ಮಂಗಳವಾರ ಪೆನ್ಸಿಲ್ವೇನಿಯದಲ್ಲಿ ಬೆಂಬಲಿಗರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಹೇಳಿದರು.

ಅವುಗಳು ಅಭಿವೃದ್ಧಿಶೀಲ ಹಣೆಪಟ್ಟಿಯಿಂದ ಡಬ್ಲುಟಿಒದಿಂದ ಹಲವಾರು ವರ್ಷಗಳಿಂದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ ಹಾಗೂ ಇದರಿಂದ ಅಮೆರಿಕಕ್ಕೆ ಹಿನ್ನಡೆಯಾಗಿದೆ ಎಂದರು.

ಚೀನಾ ಮೇಲಿನ ಆಮದು ತೆರಿಗೆ ಜಾರಿ ಮುಂದೂಡಿದ ಟ್ರಂಪ್:

ಚೀನಾದಿಂದ ಆಮದು ಮಾಡಿಕೊಳ್ಳುವ ಸರಕಿನ ಮೇಲೆ ಸೆಪ್ಟಂಬರ್ 1ರಿಂದ 10 ಶೇಕಡ ಆಮದು ತೆರಿಗೆ ವಿಧಿಸುವ ತನ್ನ ನಿರ್ಧಾರದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹಿಂದೆ ಸರಿದಿದ್ದಾರೆ.

ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ದಿನಬಳಕೆಯ ವಸ್ತುಗಳ ಮೇಲೆ ವಿಧಿಸಬೇಕಾಗಿರುವ ಆಮದು ತೆರಿಗೆಯನ್ನು ಅವರು ಮುಂದೂಡಿದ್ದಾರೆ. ಈ ನಿರ್ಧಾರವು ಅಮೆರಿಕದ ರಜಾ ಅವಧಿಯ ಖರೀದಿಗಳ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮವನ್ನು ತಗ್ಗಿಸುವುದಕ್ಕಾಗಿ ಅವರು ಈ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

 ಅಮೆರಿಕ ಅಧ್ಯಕ್ಷರ ಈ ನಿರ್ಧಾರದಿಂದ ಅಮೆರಿಕದ ಚಿಲ್ಲರೆ ವ್ಯಾಪಾರಿಗಳು ಮತ್ತು ತಂತ್ರಜ್ಞಾನ ಕಂಪೆನಿಗಳು ತಾತ್ಕಾಲಿಕ ನಿಟ್ಟುಸಿರು ಬಿಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News